ADVERTISEMENT

ಪ್ರಗತಿಗೆ ಶ್ರಮಿಸದಿದ್ದರೆ ಕಠಿಣ ಕ್ರಮ: ಇಒ

ಗ್ರಾ.ಪಂ ತೆರಿಗೆ ಹೆಚ್ಚಿಸುವ ಬಿಲ್ ಕಲೆಕ್ಟರ್‌ಗೆ ‘ಚಾಂಪಿಯನ್ಸ್ ಆಫ್ ಟ್ಯಾಕ್ಸ್ ಕಲೆಕ್ಷನ್’ ಗೌರವ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 5:07 IST
Last Updated 7 ಆಗಸ್ಟ್ 2025, 5:07 IST
ಗಜೇಂದ್ರಗಡ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಒ ಚಂದ್ರಶೇಖರ ಬಿ. ಕಂದಕೂರು ಮಾತನಾಡಿದರು
ಗಜೇಂದ್ರಗಡ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಒ ಚಂದ್ರಶೇಖರ ಬಿ. ಕಂದಕೂರು ಮಾತನಾಡಿದರು   

ಗಜೇಂದಗಡ: ‘ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಬೇಕು. ಪ್ರಗತಿಗೆ ಶ್ರಮಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಗತಿ ಸಾಧಿಸಿದ ಅಧಿಕಾರಿಗಳನ್ನು ಗೌರವಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರು ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ನರೇಗಾ ಸಿಬ್ಬಂದಿ ವರ್ಗ, ಬಿಲ್ ಕಲೆಕ್ಟರ್‌ಗಳು, ಪಂಚಾಯಿತಿ ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್‌ಗಳು, ಬೇರ್ ಫುಟ್ ಟೆಕ್ನಿಷಿಯನ್‌ಗಳು, ಗ್ರಾಮ ಕಾಯಕಮಿತ್ರರನ್ನು ಉದ್ದೇಶಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ತಗ್ಗಿದೆ. ಗಜೇಂದ್ರಗಡ ತಾಲ್ಲೂಕು ಮುಂದಿನ ವಾರದಲ್ಲಿ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಬೇಕು. ಎಲ್ಲ ಪಂಚಾಯಿತಿಗಳು ಶೇ 50ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಬೇಕು. ವಾರದೊಳಗೆ ಹೆಚ್ಚು ತೆರಿಗೆ ವಸೂಲಾತಿ ಮಾಡುವ 5 ಪಂಚಾಯಿತಿಗಳ ಬಿಲ್ ಕಲೆಕ್ಟರ್‌ಗಳಿಗೆ ‘ಚಾಂಪಿಯನ್ಸ್ ಆಫ್ ಟ್ಯಾಕ್ಸ್ ಕಲೆಕ್ಷನ್’ ಎಂದು ಪ್ರೋತ್ಸಾಹಕವಾಗಿ ಪ್ರಮಾಣಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಲಾಗುವುದು’ ಎಂದರು.

ADVERTISEMENT

‘ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಯೋಜನೆಯಡಿ ಯಾವುದೇ ಕಾಮಗಾರಿಯನ್ನೂ ವಿಳಂಬ ಮಾಡದೆ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಒಪ್ಪಿಗೆ ನೀಡಿ, ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತೆ ನರೇಗಾ ಸಿಬ್ಬಂದಿ ಮುತುವರ್ಜಿ ವಹಿಸಬೇಕು. ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಕ್ರಿಯಾಯೋಜನೆಯ ಎಲ್ಲ ಕೆಲಸಗಳಿಗೆ ತಾಂತ್ರಿಕ ಸಿಬ್ಬಂದಿ ಅಂದಾಜು ಪತ್ರಿಕೆ ಸಿದ್ಧಪಡಿಸಬೇಕು. ತಾಲ್ಲೂಕಿನ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳ, ಎಸ್ಸಿ-ಎಸ್ಟಿ ಸಮುದಾಯದ ಕೂಲಿಕಾರರಿಗೆ ಹೆಚ್ಚಾಗಿ ಕೆಲಸ ಕೊಡುವಂತೆ ಆಗಬೇಕು’ ಎಂದು ಸಿಬ್ಬಂದಿಗೆ ಸೂಚಿಸಿದರು.

ತಾಲ್ಲೂಕು ಪ‍ಂಚಾಯಿತಿ ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ್ ಇದ್ದರು.

Quote - ಪಂಚಾಯಿತಿಗಳಲ್ಲಿ ಸಾರ್ವಜನಿಕ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಪಿಡಿಒ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರೊಂದಿಗೆ ವಿನಯದಿಂದ ವರ್ತಿಸಬೇಕು ಚಂದ್ರಶೇಖರ ಬಿ. ಕಂದಕೂರು ತಾ.ಪಂ. ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.