ADVERTISEMENT

ತಿರುಪತಿ ದೇವಸ್ಥಾನದವರು ಕೇವಲ ಹಣ ಮಾಡುತ್ತಾರೆ: ಮಹಾಂತಶೆಟ್ಟರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:11 IST
Last Updated 21 ಅಕ್ಟೋಬರ್ 2024, 14:11 IST
ಲಕ್ಷ್ಮೇಶ್ವರದ ರಂಭಾಪುರಿ ಸಮುದಾಯ ಭವನದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬಿ.ಸಿ.ಟ್ರಸ್ಟ್‌ನ ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಮಟ್ಟದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಶಾಸಕ ಡಾ.ಚಂದ್ರು ಲಮಾಣಿ ಉದ್ಘಾಟಿಸಿದರು
ಲಕ್ಷ್ಮೇಶ್ವರದ ರಂಭಾಪುರಿ ಸಮುದಾಯ ಭವನದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬಿ.ಸಿ.ಟ್ರಸ್ಟ್‌ನ ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಮಟ್ಟದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಶಾಸಕ ಡಾ.ಚಂದ್ರು ಲಮಾಣಿ ಉದ್ಘಾಟಿಸಿದರು   

ಲಕ್ಷ್ಮೇಶ್ವರ: ‘ತಿರುಪತಿ ದೇವಸ್ಥಾನದವರು ಕೇವಲ ಹಣ ಮಾಡುತ್ತಾರೆ. ತಿರುಪತಿ ದೇವಸ್ಥಾನದಲ್ಲಿ ಕೋಟ್ಯಂತರ ಹಣ ಸಂಗ್ರಹವಾಗುತ್ತದೆ. ಆದರೆ ಅದರಿಂದ ಬಡ ಜನತೆಗೆ ಯಾವುದೇ ಉಪಯೋಗ ಆಗುತ್ತಿಲ್ಲ. ಆದರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಮಾತ್ರ ಹಣವನ್ನು ಬಡವರ ಆರ್ಥಿಕ ಪ್ರಗತಿಗಾಗಿ ಬಳಕೆ ಮಾಡುತ್ತಾರೆ’ ಎಂದು ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಹೇಳಿದರು.

ಇಲ್ಲಿನ ರಂಭಾಪುರಿ ಸಮುದಾಯ ಭವನದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‌ನ ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಮಟ್ಟದ ಪ್ರಗತಿಬಂಧು ಸ್ವ -ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಜನರಿಗಾಗಿ, ಸಮಾಜಕ್ಕಾಗಿ ಸೇವೆ ನೀಡುವ ಯಾವುದಾದರೂ ಧಾರ್ಮಿಕ ಕ್ಷೇತ್ರ ಇದ್ದರೆ ಅದು ಶ್ರೀಕ್ಷೇತ್ರ ಧರ್ಮಸ್ಥಳ ಮಾತ್ರ. ಸಾಲ ನೀಡುವಾಗ ಹತ್ತು ಹಲವು ಕಾಗದಪತ್ರಗಳು, ಜಾಮೀನುಗಳನ್ನು ನೀಡಬೇಕಾಗಿರುವ ಈ ಕಾಲದಲ್ಲಿ ಯಾವುದೇ ಷರತ್ತು, ಜಾಮೀನುಗಳಿಲ್ಲದೆ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸಾಲವನ್ನು ನೀಡುವ ಮೂಲಕ ವಿಶ್ವಾಸದಿಂದ ಕಾರ್ಯ ಮಾಡುತ್ತಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಾಗಿದೆ’ ಎಂದರು.

ADVERTISEMENT

ಸಮಾವೇಶ ಉದ್ಘಾಟಿಸಿದ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ‘ಭಕ್ತಿ, ಶ್ರದ್ದೆ, ನಂಬಿಕೆಯಿಂದ ನಡೆದರೆ ಅದರಲ್ಲಿ ಯಶಸ್ಸು ಕಾಣಲು ಸಾಧ್ಯ ಎನ್ನುವುದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಸಾಕ್ಷಿಯಾಗಿದೆ. ಪ್ರತಿ ಕುಟುಂಬದಲ್ಲಿ ಆರ್ಥಿಕ ಸುಸ್ಥಿರತೆಯನ್ನು ತರುವಲ್ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದರು.

ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಗದಗ ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ನಾಗಸುಬ್ಬರೆಡ್ಡಿ, ಜಿಲ್ಲಾ ನಿರ್ದೇಶಕ ಯೋಗೀಶ್ ಎ. ಇದ್ದರು.

ಕ್ಷೇತ್ರ ಯೋಜನಾಧಿಕಾರಿ ಪುನೀತ್ ಓಲೇಕಾರ ಸ್ವಾಗತಿಸಿದರು. ಶಾಂತಾ ಬೆನಕಣ್ಣವರ ನಿರೂಪಿಸಿದರು. ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಗಳ ಸ್ವ-ಸಹಾಯ ಗುಂಪುಗಳ ಸಾವಿರಾರು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.