ADVERTISEMENT

ಗದಗ | 'ಅತಿಯಾದ ಯೂರಿಯಾ ಬಳಕೆ: ಆರೋಗ್ಯ ಹಾನಿ'

ನ್ಯಾನೊ ಯೂರಿಯಾ ಬಳಕೆಗೆ ಒತ್ತು ನೀಡಿ: ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌.

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:37 IST
Last Updated 2 ಆಗಸ್ಟ್ 2025, 4:37 IST
ತಾರಾಮಣಿ ಜಿ.ಎಚ್‌.
ತಾರಾಮಣಿ ಜಿ.ಎಚ್‌.   

ಗದಗ: ‘ಅತಿಯಾದ ಯೂರಿಯಾ ಬಳಕೆಯಿಂದ ಮಣ್ಣು, ಪರಿಸರ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಜಿಲ್ಲೆಯ ರೈತರು ಮಣ್ಣು ಪರೀಕ್ಷೆಯ ವರದಿಯನ್ವಯ ಶಿಫಾರಸಿನಂತೆ ಯೂರಿಯಾ ರಸಗೊಬ್ಬರ ಬಳಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌. ತಿಳಿಸಿದ್ದಾರೆ. 

‘2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆಯಾಗಿ 40-50 ದಿನಗಳ ಬೆಳೆಯಿದ್ದು ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ನೀಡಲಾಗುತ್ತಿದೆ. ಆದರೆ, ರೈತರು ಶಿಫಾರಸಿನ ಪ್ರಮಾಣಕ್ಕಿಂತ ಹೆಚ್ಚು ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಬಳಸುತ್ತಿದ್ದಾರೆ. ಇದರಿಂದ ಬೆಳೆಯು ಹುಲುಸಾಗಿ ಬೆಳೆದು ಕೀಟ ಮತ್ತು ರೋಗಬಾಧೆ ಹೆಚ್ಚಾಗುತ್ತಿದೆ. ಇವುಗಳನ್ನು ನಿಯಂತ್ರಿಸಲು ವಿವೇಚನ ರಹಿತವಾಗಿ ಪೀಡೆನಾಶಕಗಳನ್ನು ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ರೈತರು ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದ್ದಾರೆ.

‘ಯೂರಿಯಾ ರಸಗೊಬ್ಬರದಲ್ಲಿನ ಶೇ 30-50ರಷ್ಟು ಸಾರಜನಕ ಮಾತ್ರ ಬೆಳೆಗಳಿಂದ ಹೀರಲ್ಪಟ್ಟು ಉಳಿದದ್ದು, ನೈಟ್ರೇಟ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಿ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನೀರಿನಲ್ಲಿ ನೈಟ್ರೇಟ್‌ ಅಂಶವು 45 ಮಿಲಿ.ಗ್ರಾಂ./ ಲೀ., ಕಡಿಮೆ ಇರಬೇಕಾಗಿರುತ್ತದೆ. ಆದರೆ, ಕೇಂದ್ರ ಅಂತರ್ಜಲ ಮಂಡಳಿಯ ವರದಿ ಅನ್ವಯ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ವಿಶ್ಲೇಷಿಸಿದ ನೀರಿನ ಮಾದರಿಗಳಲ್ಲಿ ನೈಟ್ರೇಟ್‌ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಇದರಿಂದಾಗಿ ಮಾನವನ ಆರೋಗ್ಯದ ಮೇಲೆ ವಿಶೇಷವಾಗಿ ಶಿಶುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ತಿಳಿಸಿದ್ದಾರೆ. 

ದ್ವಿದಳ ಧಾನ್ಯ ಬೆಳೆಗಳೊಂದಿಗೆ ಬೆಳೆ ಪರಿವರ್ತಿಸುವುದು, ಪರ್ಯಾಯ ಗೊಬ್ಬರಗಳಾದ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ ಹಾಗೂ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕಾಗಿದೆ. ಹರಳು ರೂಪದ ಯೂರಿಯಾ ರಸಗೊಬ್ಬರ ಬಳಸುವುದರಿಂದ ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತದೆ. ಅಲ್ಲದೇ, ನ್ಯಾನೊ ರಸಗೊಬ್ಬರಗಳು ಪೋಷಕಾಂಶ ಒದಗಿಸುವ ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ನ್ಯಾನೋ ರಸಗೊಬ್ಬರಗಳ ಸಿಂಪಡಿಸುವಿಕೆಯು ರಾಸಾಯನಿಕ ಗೊಬ್ಬರಗಳಿಂದ ಮಣ್ಣಿನ ಆರೋಗ್ಯವನ್ನು ಉಳಿಸುತ್ತದೆ ಹಾಗೂ ಇದು ಪರಿಸರ ಸ್ನೇಹಿಯಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಯೂರಿಯಾ ರಸಗೊಬ್ಬರದ ಬಳಕೆ ಏರಿಕೆಯಾಗುತ್ತಿದ್ದು ಇದರಿಂದ ಎನ್.ಪಿ.ಕೆ.ಅನುಪಾತದಲ್ಲಿ ವ್ಯತ್ಯಾಸ ಉಂಟಾಗಿ ಮಣ್ಣಿನ ಆರೋಗ್ಯಕ್ಕೆ ಹಾನಿಯಾಗುತ್ತಿದೆ

ಜಿ.ಎಚ್‌.ತಾರಾಮಣಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ

‘ಉತ್ಪಾದನಾ ವೆಚ್ಚ ಕಡಿಮೆ’ ‘ಹರಳು ರೂಪದ ಯೂರಿಯಾ ರಸಗೊಬ್ಬರದ ಬದಲಾಗಿ ದ್ರವರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಎಚ್‌.ತಾರಾಮಣಿ ತಿಳಿಸಿದ್ದಾರೆ. ‘ನ್ಯಾನೋ ಯೂರಿಯಾವನ್ನು ಪ್ರತಿ ಲೀಟರ್‌ ನೀರಿಗೆ 3ರಿಂ 4 ಎಂ.ಎಲ್. ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಮೊಳಕೆಯೊಡೆದ 30-35 ದಿನಗಳಿಗೊಮ್ಮೆ ಹಾಗೂ 45-50 ದಿನಗಳಿಗೊಮ್ಮೆ ಸಿಂಪರಣೆ ಮಾಡಬೇಕು’ ಎಂದು ಹೇಳಿದ್ದಾರೆ.  ‘ಒಂದು ಬಾಟಲ್ ನ್ಯಾನೋ ಯೂರಿಯಾ ಒಂದು ಚೀಲ ರಸಗೊಬ್ಬರಕ್ಕೆ ಸಮವಾಗಿರುತ್ತದೆ. ಶೇ 20ರಷ್ಟು ಸಾರಜನಕವನ್ನು ಹೊಂದಿರುವ ನ್ಯಾನೊ ಯೂರಿಯಾ ಬೆಳೆಗಳಿಗೆ ಅವಶ್ಯಕವಾಗಿರುವ ಸಾರಜನಕವನ್ನು ಒದಗಿಸುವ ಮೂಲವಾಗಿದೆ ಮತ್ತು ಹರಳು ರೂಪದ ಯೂರಿಯಾ ಬಳಕೆಯನ್ನು ಶೇ 50ರಷ್ಟು ಕಡಿಮೆ ಮಾಡಬಹುದಾಗಿದೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.