ADVERTISEMENT

ಬೆಳೆ ವಿಮೆ ಪರಿಹಾರ ಪಾವತಿಗೆ ಆಗ್ರಹ

ನರಗುಂದ: ಕೃಷಿ ಇಲಾಖೆ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 14:11 IST
Last Updated 5 ಮಾರ್ಚ್ 2025, 14:11 IST
ನರಗುಂದ ಕೃಷಿ ಇಲಾಖೆ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು
ನರಗುಂದ ಕೃಷಿ ಇಲಾಖೆ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು   

ನರಗುಂದ: ’ತಾಲ್ಲೂಕಿನ ಕೊಣ್ಣೂರ ಹಾಗೂ ನರಗುಂದ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಗೋವಿನ ಜೋಳ, ಹೆಸರು, ಹತ್ತಿ ಹಾಗೂ ಉಳ್ಳಾಗಡ್ಡಿ ಬೆಳೆಗಳು ಹಾನಿಯಾಗಿದ್ದವು. ರೈತರು ಸಂಬಂಧಿಸಿದ ಕಂಪನಿಗೆ ಬೆಳೆ ವಿಮಾ ಕಂತು ಪಾವತಿಸಿದ್ದರೂ ಕಂಪೆನಿಯವರು ಇಲ್ಲಿಯವರೆಗೂ ರೈತರಿಗೆ ಬೆಳೆ ವಿಮೆಯಾಗಲಿ ಮಧ್ಯಂತರ ಪರಿಹಾರವಾಗಲಿ ಪಾವತಿಸಿಲ್ಲ’ ಎಂದು ಆರೋಪಿಸಿ ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ಬೆಳೆಹಾನಿಗೆ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು ಎಂದು ಸರ್ಕಾರದ ಸೂಚನೆಯಿದೆ. ರೈತರಿಂದ ಪರಿಹಾರಕ್ಕೆ ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಸಲ್ಲಿಸಿದವರಿಗೆ ಮಧ್ಯಂತರ ಪರಿಹಾರ ನೀಡದೇ ಅರ್ಜಿ ಸಲ್ಲಿಸದವರಿಗೆ ಪರಿಹಾರ ಜಮಾ ಆಗಿದೆ ಎಂದು ರೈತರು ಆರೋಪಿಸಿದರು.

ವಿಮಾ ಕಂಪೆನಿ ಅಧಿಕಾರಿಗಳನ್ನು ಇಲ್ಲಿಗೆ ಕರೆಯಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲುವುದಿಲ್ಲವೆಂದು ರೈತರು ಪಟ್ಟು ಹಿಡಿದರು. ಆಗ ಕೃಷಿ ಇಲಾಖೆ ಅಧಿಕಾರಿ ಮಂಜುನಾಥ ಜನಮಟ್ಟಿ ಮಧ್ಯ ಪ್ರವೇಶಿಸಿ, ಅವರನ್ನು ಸಮಾಧಾನ ಪಡಿಸಿದರು.

ADVERTISEMENT

ಇದೇ ವೇಳೆ ತಹಶೀಲ್ದಾರ್ ಶ್ರೀಶೈಲ ತಳವಾರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಮೂರು ದಿನದೊಳಗೆ ವಿಮಾ ಕಂಪನಿ ಮುಖ್ಯಾಧಿಕಾರಿ ಬಂದು ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

’ಬೆಳೆ ವಿಮೆಗಾಗಿ 18,700 ಸಾವಿರ ಅರ್ಜಿ ಬಂದಿದ್ದು, ಅತಿವೃಷ್ಟಿ ಸಂದರ್ಭದಲ್ಲಿ ಮಧ್ಯಂತರ ಪರಿಹಾರಕ್ಕೆ 6,800 ಅರ್ಜಿ ಬಂದಿವೆ. ಇದರಲ್ಲಿ ಕಂಪನಿಯಿಂದ 6,760 ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ 18,700 ಅರ್ಜಿಗಳಿಗೂ ಮಧ್ಯಂತರ ಪರಿಹಾರ ಅಥವಾ ಸಂಪೂರ್ಣ ಬೆಳೆ ವಿಮೆ ಪಾವತಿಸಬೇಕೆಂಬ ಆಗ್ರಹವಿದೆ. ಎರಡು ದಿನದಲ್ಲಿ ಕಂಪನಿ ಅಧಿಕಾರಿ ಬರುವುದಾಗಿ ತಿಳಿಸಿದ್ದು, ರೈತರ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗುವುದು‘ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಜನಮಟ್ಟಿ ತಿಳಿಸಿದರು.

ಶಂಕ್ರಗೌಡ ಶಿರಿಯಪ್ಪಗೌಡ್ರ, ಸತೀಶ ಕರಿಯಪ್ಪನವರ, ಸಂದೀಪ ಯಲ್ಲಪ್ಪಗೌಡ್ರ, ಅಶೋಕ ಕಾಮನ್ನವರ, ಸುನೀಲಗೌಡ ಪಾಟೀಲ, ಫಕೀರಪ್ಪ ಅಣ್ಣೀಗೇರಿ, ದಾದಾಕಲಂದರ ಆಶೇಖಾನ, ಶಿವಾನಂದ ಶಿರಹಟ್ಟಿ, ಶಿವನಗೌಡ ಗಿರಿಯಪ್ಫಗೌಡ್ರ, ಶಂಕರಗೌಡ ಕರಿಗೌಡ್ರ, ತಿಮ್ಮರಡ್ಡಿ ವಾಸನ, ಆನಂದ ಬಿಜಾಪುರ, ಗಿರೀಶ ಕಿತ್ತೂರ, ರಮೇಶ ಮಳಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.