ADVERTISEMENT

ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿಗೆ ಆಗ್ರಹ: ಮುಂದುವರಿದ ಧರಣಿ; ಬಂದ್‌ ಇಂದು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:33 IST
Last Updated 20 ನವೆಂಬರ್ 2025, 4:33 IST
<div class="paragraphs"><p><strong>ಲಕ್ಷ್ಮೇಶ್ವರದಲ್ಲಿ ನಡೆಯುತ್ತಿರುವ ರೈತರ ಹೋರಾಟ ಉದ್ಧೇಶಿಸಿ ಆದರಹಳ್ಳಿ ಕುಮಾರ ಮಹಾರಾಜರು ಮಾತನಾಡಿದರು</strong></p></div>

ಲಕ್ಷ್ಮೇಶ್ವರದಲ್ಲಿ ನಡೆಯುತ್ತಿರುವ ರೈತರ ಹೋರಾಟ ಉದ್ಧೇಶಿಸಿ ಆದರಹಳ್ಳಿ ಕುಮಾರ ಮಹಾರಾಜರು ಮಾತನಾಡಿದರು

   

ಲಕ್ಷ್ಮೇಶ್ವರ: ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ರೈತಪರ ಸಂಘಟನೆ
ಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಐದನೇ ದಿನ ಪೂರೈಸಿತು. ಗುರುವಾರ ಬಂದ್‌ಗೆ ಕರೆ ನೀಡಲಾಗಿದೆ.

ತಾಲ್ಲೂಕಿನ ಶಿಗ್ಲಿ ಗ್ರಾಮದ ರೈತರು ಐದು ಟ್ರ್ಯಾಕ್ಟರ್‌ಗಳಲ್ಲಿ ಪಟ್ಟಣಕ್ಕೆ ಬಂದು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬೀದಿಬದಿ ವ್ಯಾಪಾರಸ್ಥರ ಸಂಘ, ಬಜಾರ್‌ ವ್ಯಾಪಾರಸ್ಥರ ಸಂಘ, ಎಪಿಎಂಸಿ ವರ್ತಕರ ಸಂಘ, ಗೋಸಾವಿ ಸಮಾಜದವರು ಸಹ ಬೆಂಬಲ ಸೂಚಿಸಿದರು.

ADVERTISEMENT

ಆದರಹಳ್ಳಿಯ ಕುಮಾರ ಮಹಾರಾಜರು ಮೂರು ದಿನಗಳಿಂದ ಉಪವಾಸ ನಡೆಸುತ್ತಿದ್ದು, ಅವರೊಂದಿಗೆ ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ, ರಾಮಣ್ಣ ಗೌರಿ, ಬಸಣ್ಣ ಹಂಜಿ ಉಪವಾಸ ಆರಂಭಿಸಿದರು.

ಈ ಸಂದರ್ಭದಲ್ಲಿ ಕುಮಾರ ಮಹಾರಾಜರು ಮಾತನಾಡಿ, ‘ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ. ಖರೀದಿ ಕೇಂದ್ರ ತೆರೆಯುವವರೆಗೆ ಉಪವಾಸ ಕೈಬಿಡುವುದಿಲ್ಲ. ರೈತರ ಒಗ್ಗಟ್ಟು ಮುರಿಯಲು ಹಲವು ಕಾಣದ ಕೈಗಳು ಕೆಲಸ ಮಾಡುತ್ತಿವೆ. ರೈತರು ಒಗ್ಗಟ್ಟಾಗಿ ಹೋರಾಟ ನಡೆಸುವುದು ಮುಖ್ಯ. ಯಾವುದೇ ಉದ್ವೇಗಕ್ಕೆ ಒಳಗಾಗಬಾರದು’ ಎಂದು ತಿಳಿಸಿದರು.

‘ರೈತರ ಸಹನೆ ಪರೀಕ್ಷಿಸದಿರಿ’:  ‘ಸರ್ಕಾರವು ರೈತರ ಸಹನೆ ಪರೀಕ್ಷೆ ಮಾಡಬಾರದು. ತಾನೇ ಘೋಷಿಸಿರುವ ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅವರಿಗೆ ತೊಂದರೆ ಕೊಟ್ಟರೆ ಯಾವುದೇ ಸರ್ಕಾರ ಶಾಂತಿಯಿಂದ ಇರಲು ಸಾಧ್ಯ ಇಲ್ಲ’ ಎಂದು ಕುಂದಗೋಳದ ಬಸವಣ್ಣಜ್ಜನವರು, ಜಮಖಂಡಿಯ ಮಹಾಂತ ದೇವರು ಹೇಳಿದರು.

ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಮೈಸೂರಿನ ಫಯಾಜ್, ಚನ್ನಪ್ಪ ಜಗಲಿ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಎಸ್.ಪಿ. ಬಳಿಗಾರ, ರಾಮಣ್ಣ ಲಮಾಣಿ ಶಿಗ್ಲಿ, ಡಿ.ವೈ. ಹುನಗುಂದ ಮಾತನಾಡಿದರು.

ಕುಕನೂರಿನ ಚನ್ನಮಲ್ಲ ದೇವರು, ಟಾಕಪ್ಪ ಸಾತಪುತೆ, ವೀರಣ್ಣ ಪವಾಡದ, ಶಿವಣ್ಣ ಮೂಲಿಮನಿ, ಹೊನ್ನಪ್ಪ ವಡ್ಡರ, ಕೇಶವ ಗುಲಗಂಜಿ, ಶಂಭು ಹುನಗುಂದ, ಬಸಣ್ಣ ತೋಟದ, ರಮೇಶ ಬಾರಕೇರ, ಪವನ ಬಂಕಾಪುರ, ಮಲ್ಲಿಕಾರ್ಜುನ ನೀರಾಲೋಟಿ, ಈಶ್ವರ ಹುಲಗೂರ ಇದ್ದರು.

ರೈತರೊಂದಿಗೆ ಚೆಲ್ಲಾಟ ಸಲ್ಲ: ದಿಂಗಾಲೇಶ್ವರ ಸ್ವಾಮೀಜಿ

ಲಕ್ಷ್ಮೇಶ್ವರ: ‘ಯಾವುದೇ ಸರ್ಕಾರ ಇರಲಿ, ರೈತರೊಂದಿಗೆ ಚೆಲ್ಲಾಟ ಆಡಬಾರದು. ರೈತರಿಗೆ ಗೌರವ ಕೊಡಬೇಕು’ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ, ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

‘ಆಡಳಿತಕ್ಕೆ ಬರುವ ಯಾವುದೇ ಸರ್ಕಾರ ರೈತರ ಪರವಾಗಿ ಇರುವುದಿಲ್ಲ. ರೈತರು ಶಾಂತಿಯುತವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಕೇಳುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರನ್ನು ನಿರ್ಲಕ್ಷಿಸುವ ಯಾವುದೇ ಸರ್ಕಾರವು ಅಧಿಕಾರದಲ್ಲಿ ಉಳಿಯುವುದಿಲ್ಲ. ಕಬ್ಬು ಬೆಳೆಗಾರರಿಗೆ ಮನ್ನಣೆ ನೀಡಿದಂತೆ ಗೋವಿನಜೋಳ ಬೆಳೆದ ರೈತರಿಗೂ ಮನ್ನಣೆ ನೀಡಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ ಶೀಘ್ರದಲ್ಲೇ ಖರೀದಿ ಕೇಂದ್ರ ಆರಂಭಿಸದಿದ್ದರೆ ಆಯಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಗೋವಿನಜೋಳ ಸುರಿದು ಪ್ರತಿಭಟನೆ ಮಾಡಬೇಕು. ಹೆದ್ದಾರಿಗಳಲ್ಲಿ ಗೋವಿನಜೋಳ ಹಾಕಿ, ವಾಹನಗಳ ಸಂಚಾರಕ್ಕೆ ತಡೆಯೊಡ್ಡುವ  ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.