ADVERTISEMENT

ಎನ್‌ಇಪಿ ಪುನರ್‌ ಅವಲೋಕಿಸಿ

ಮಹಿಳಾ ದಿನಾಚರಣೆ-, ಪ್ರಶಸ್ತಿ ಪ್ರದಾನ: ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 4:51 IST
Last Updated 20 ಮಾರ್ಚ್ 2022, 4:51 IST
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಅಂಗವಾಗಿ ಪ್ರತಿಭಾನ್ವಿತ ಸಾಧಕ ಶಿಕ್ಷಕ ಶಿಕ್ಷಕಿಯರಿಗೆ, ಉಪನ್ಯಾಸಕರಿಗೆ ‘ಶಿಕ್ಷಣ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಅಂಗವಾಗಿ ಪ್ರತಿಭಾನ್ವಿತ ಸಾಧಕ ಶಿಕ್ಷಕ ಶಿಕ್ಷಕಿಯರಿಗೆ, ಉಪನ್ಯಾಸಕರಿಗೆ ‘ಶಿಕ್ಷಣ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಗದಗ: ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸುವ ಮುನ್ನ ವ್ಯಾಪಕ ಚರ್ಚೆಯಾಗಬೇಕು. ಶಿಕ್ಷಣ ಕ್ಷೇತ್ರದ ಮೇಲೆ, ಆರ್ಥಿಕವಾಗಿ ಹಿಂದುಳಿದ ಹಾಗೂ ಶೋಷಿತರಿಗೆ ಆಗುವ ದುಷ್ಪರಿಣಾಮಗಳ ಚಿಂತನೆ ಆಗಬೇಕಿತ್ತು. ಲೋಪದೋಷಗಳನ್ನು ಸರಿಪಡಿಸದಿದ್ದಲ್ಲಿ ಶಿಕ್ಷಣ ಕ್ಷೇತ್ರ ತಲ್ಲಣಗೊಳ್ಳುವ ಸಾಧ್ಯತೆ ಇದೆ ಎಂದು ಶಾಸಕ ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿಯು ನಗರದ ಕನಕ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮುನ್ನ ಅದರಿಂದಾಗಬಹುದಾದ ಪರಿಣಾಮಗಳನ್ನು ಪುನರ್ ಅವಲೋಕಿಸಬೇಕು. ಹೊಸ ಶಿಕ್ಷಣ ನೀತಿ ರೂಪಿಸುವ ತಜ್ಞರ ಸಮಿತಿ ವಿಷಯದ ಗಂಭೀರತೆಯನ್ನು ಅರಿಯಬೇಕು. ವಿಧಾನ ಪರಿಷತ್‌ನಲ್ಲಿ ವ್ಯಾಪಕ ಚರ್ಚೆ ಆಗಬೇಕಿತ್ತು, ಆದರೆ ಆಗಲೇ ಇಲ್ಲ. ನೈಜ ಶಿಕ್ಷಣದಲ್ಲಿ ಬದಲಾವಣೆ ತರುವಂತಾಗಬೇಕು.
ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಂಡಿದ್ದೇವೆಂದು ಅನುಷ್ಠಾನಗೊಳಿಸಲು ಮುಂದಾದಲ್ಲಿ ಬರಲಿರುವ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳಾಗುವ ಸಾಧ್ಯತೆಗಳಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ ಶಿಕ್ಷಕ, ತಮ್ಮ ಹಕ್ಕು, ಬೇಡಿಕೆಗಳಿಗೆ ಹೋರಾಟ ನಡೆಸುವವರು ತಮ್ಮ ಕರ್ತವ್ಯ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುವ ಕಾರ್ಯವೂ ಆಗಬೇಕು ಎಂದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಅಂಗವಾಗಿ ಉಪನ್ಯಾಸಕಿ ಜಿ.ಬಿ. ಅಂಗಡಿ ಸೇರಿದಂತೆ ಹಲವು ಪ್ರತಿಭಾನ್ವಿತ ಸಾಧಕ ಶಿಕ್ಷಕ ಶಿಕ್ಷಕಿಯರಿಗೆ, ಉಪನ್ಯಾಸಕರಿಗೆ ‘ಶಿಕ್ಷಣ ಸಿರಿ’ ಪ್ರಶಸ್ತಿ ಹಾಗೂ 11 ವೈದ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಶಿಕ್ಷಕರು, ಉಪನ್ಯಾಸಕರ ಕ್ರಿಯಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ‘ಸಮಿತಿಯ ಮೂಲಕ ಶಿಕ್ಷಕರು, ಉಪನ್ಯಾಸಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತಿದೆ. ಸಂಘಟನೆ ಗಟ್ಟಿಗೊಳಿಸುವ ಮೂಲಕ ಶಿಕ್ಷಕರು, ಉಪನ್ಯಾಸಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಮಿತಿ ಸದಾ ಬೆಂಗಾವಲಾಗಿ ನಿಂತಿದೆ. ಸಂಘಟನೆಗೆ ತಮ್ಮೆಲ್ಲರ ಬೆಂಬಲ ಇರಲಿ’ ಎಂದರು.

ಪದವಿ ಪೂರ್ವ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರು ಶಿಕ್ಷಕರ, ಉಪನ್ಯಾಸಕರ ಸಂಘಟನೆ ಹಾಗೂ ಬಸವರಾಜ ಗುರಿಕಾರ ಅವರ ಸಂಘಟನ ಚತುರತೆಯನ್ನು ಬಣ್ಣಿಸಿದರು. ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಅತಿಥಿ ಉಪನ್ಯಾಸ ನೀಡಿದರು. ಗದುಗಿನ ಓಂಕಾರೇಶ್ವರ ಹಿರೇಮಠದ ಫಕೀರೇಶ್ವರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಶೋಭಾ ಶಲವಡಿ ಪ್ರಾರ್ಥಿಸಿದರು. ಜೆ.ಪಿ.ವಿಶೇಷ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡಿದರು. ಗದಗ ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್.ಸೋಮಣ್ಣವರ ಸ್ವಾಗತಿಸಿದರು. ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಯರಗುಡಿ ನಿರೂಪಿಸಿದರು. ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಚ್.ಕಡಿವಾಲ ವಂದಿಸಿದರು.

‘ಗುರಿಕಾರ ಉತ್ತಮ ಸಂಘಟಕ’

ಉತ್ತಮ ನಾಯಕತ್ವದ ಗುಣ ಹೊಂದಿರುವ, ಶಿಕ್ಷಕರ ಧ್ವನಿ, ಶಿಕ್ಷಣದ ಧ್ವನಿ, ಸಮಾಜದ ಓರೆಕೋರೆಗಳನ್ನು ತಿದ್ದಬೇಕಾದ ವ್ಯಕ್ತಿತ್ವದ ವ್ಯಕ್ತಿಗಳು ವಿಧಾನ ಪರಿಷತ್ತಿಗೆ ಬರಬೇಕಾದ ಅಗತ್ಯತೆ ಇದೆ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

ಪ್ರಾವೀಣ್ಯತೆ, ಚಾಕಚಕ್ಯತೆ, ಚಾಣಾಕ್ಷತೆ ಬೇಕು. ಆ ನಿಟ್ಟಿನಲ್ಲಿ ಆಲೋಚನೆ ನಡೆಯಲಿ. ಬಸವರಾಜ ಗುರಿಕಾರ ಅತ್ಯಂತ ಗಟ್ಟಿ ಮನಸ್ಸಿನ ಸಂಘಟಕರು, ಸಂಘಟನಾ ಸಾಮರ್ಥ್ಯವುಳ್ಳವರು. ಸಂಘಟನೆಯ ಮೂಲಕ ಮೇಲೆ ಬಂದವರು. ಅವರೇನಾದರೂ ಮೇಲೆ ಬರುವುದಾದಲ್ಲಿ ನಿಮ್ಮೆಲ್ಲರ ಸಂಘಟನೆಯ ಶಕ್ತಿ, ಬೆಂಬಲದಿಂದ ನಾಯಕರಾಗಿ ರೂಪುಗೊಳ್ಳಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.