ADVERTISEMENT

ಗದಗ | ಮಹಿಳೆಯರು ಆರೋಗ್ಯ ಕಾಳಜಿ ಮಾಡಿ: ಡಾ. ಶಿಲ್ಪಾ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:40 IST
Last Updated 2 ಆಗಸ್ಟ್ 2025, 7:40 IST
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ಸುವರ್ಣ ಮಹೋತ್ಸವದ ಸಂಭ್ರಮದ ಅಂಗವಾಗಿ ಸಂಸ್ಥೆಯ ಮಹಿಳಾ ಘಟಕದಿಂದ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮವನ್ನು ಪ್ರಸೂತಿ ತಜ್ಞೆ ಡಾ. ಶಿಲ್ಪಾ ಪ್ರಕಾಶ ಕುಷ್ಟಗಿ ಉದ್ಘಾಟಿಸಿದರು
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ಸುವರ್ಣ ಮಹೋತ್ಸವದ ಸಂಭ್ರಮದ ಅಂಗವಾಗಿ ಸಂಸ್ಥೆಯ ಮಹಿಳಾ ಘಟಕದಿಂದ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮವನ್ನು ಪ್ರಸೂತಿ ತಜ್ಞೆ ಡಾ. ಶಿಲ್ಪಾ ಪ್ರಕಾಶ ಕುಷ್ಟಗಿ ಉದ್ಘಾಟಿಸಿದರು   

ಗದಗ: ‘ಆರೋಗ್ಯ ಎಲ್ಲರಿಗೂ ಅತಿ ಮುಖ್ಯ. ಹಾಗಾಗಿ, ಆರೋಗ್ಯ ಕಾಳಜಿ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ’ ಎಂದು ಪ್ರಸೂತಿ ತಜ್ಞೆ ಡಾ. ಶಿಲ್ಪಾ ಪ್ರಕಾಶ ಕುಷ್ಟಗಿ ಹೇಳಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ಸುವರ್ಣ ಮಹೋತ್ಸವದ ಸಂಭ್ರಮದ ಅಂಗವಾಗಿ ಸಂಸ್ಥೆಯ ಮಹಿಳಾ ಘಟಕದಿಂದ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹೆಣ್ಣುಮಕ್ಕಳು ಮನೆಯ ದೀಪ. ಮಹಿಳೆಯರು ಆರೋಗ್ಯವಾಗಿದ್ದರೆ ಮನೆಯವರೆಲ್ಲರೂ ಆರೋಗ್ಯದಿಂದ ಇರುತ್ತಾರೆ. ಋತುಚಕ್ರದ ಸಮಸ್ಯೆ ಇರುವ ಮಹಿಳೆಯರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ 40ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಹಾಗೂ ಗರ್ಭಕೋಶದ ಕ್ಯಾನ್ಸರ್‌ ಕಂಡು ಬರುತ್ತಿವೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ವರ್ಷಕ್ಕೊಮ್ಮೆ ಪರೀಕ್ಷಿಸಿಕೊಳ್ಳಬೇಕು’ ಎಂದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಮಾತನಾಡಿ, ಸಂಸ್ಥೆಯ ಮಹಿಳಾ ಘಟಕವು ಮಹಿಳಾ ದಿನಾಚರಣೆಯಿಂದ ಹಿಡಿದು ವರ್ಷಪೂರ್ತಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಕ್ರೀಡಾ ಚಟುವಟಿಕೆಯಿಂದ ಮಹಿಳೆಯರ ಶಕ್ತಿ ಸಾಮರ್ಥ್ಯ ಮತ್ತು ಧೈರ್ಯ ಹೆಚ್ಚಾಗುತ್ತದೆ’ ಎಂದರು.

ಗದಗ ನಗರದ ವೈಷ್ಣವಿ ಈರಣ್ಣ ಇಮ್ಮಡಿ ಕುಸ್ತಿ ಆಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿರುವುದು ಹೆಮ್ಮೆಪಡುವ ವಿಷಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ನಂದಾ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ನಾವು ಸೇವಿಸುವಂತಹ ಆಹಾರ ಪದಾರ್ಥಗಳಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ಆಹಾರ ಪದ್ದತಿ ಬದಲಾವಣೆ ಮಾಡಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.

ರೇಣುಕಾ ಲಿಂಗರಾಜ ಅಮಾತ್ಯ ಪ್ರಾರ್ಥನೆ ಹಾಡಿದರು. ಜಯಶ್ರೀ ತಾತನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಉಮೇಶ ಹುಬ್ಬಳ್ಳಿ ಮತ್ತು ಮಂಗಳಾ ಮಂಜುನಾಥ ಬೇಲೇರಿ ಅತಿಥಿಗಳನ್ನು ಪರಿಚಯಿಸಿದರು. ಸುವರ್ಣಾ ಎಸ್. ಮದರಿಮಠ ನಿರೂಪಿಸಿದರು. ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ವಂದಿಸಿದರು.

ವಿವಿಧ ಮನರಂಜನಾ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸದಸ್ಯರು ಪಾಲ್ಗೊಂಡು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.