ADVERTISEMENT

ಗದಗ | ಸ್ಫೋಟಕ ವಸ್ತುಗಳ ವಶ; ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:57 IST
Last Updated 24 ಸೆಪ್ಟೆಂಬರ್ 2020, 14:57 IST

ಮುಳಗುಂದ: ಇಲ್ಲಿಗೆ ಸಮೀಪದ ಶೀತಾಲಹರಿ ಗ್ರಾಮದ ಹೊರವಲಯದ ಮನೆಯೊಂದರ ಮೇಲೆ ಗದಗ ಗ್ರಾಮೀಣ ಸಿಪಿಐ ರವಿಕುಮಾರ ಕಪ್ಪತನವರ ನೇತೃತ್ವದ ತಂಡ ದಾಳಿ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಶೀತಾಲಹರಿ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಕ್ರಷರ್‌ಗಳಿದ್ದು, ಸುತ್ತಮುತ್ತಲ ನೂರಾರು ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತದೆ. ಕಲ್ಲಿನ ಗುಡ್ಡಗಳನ್ನು ಸ್ಫೋಟಿಸಲು ಪರವಾನಗಿ ಇಲ್ಲದೇ ಸ್ಫೋಟಕ ವಸ್ತಗಳನ್ನು ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೋಲಿಸರು ಗುರುವಾರ ದಾಳಿ ನಡೆಸಿದ್ದರು.

ಈ ವೇಳೆ 625 ಡೆಟೊನೇಟರ್, 200 ಜಿಲೆಟಿನ್‌ ಕಡ್ಡಿಗಳು, 10 ಕೆ.ಜಿ. ಅಮೋನಿಯಂ ನೈಟ್ರೇಟ್‌ ಮತ್ತು ಸ್ಫೋಟಕ್ಕೆ ಬಳಸುವ 3 ಮೆಗ್ಗರ್‌ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹನಮಂತಪ್ಪ ಯರೆವಡ್ಡ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಅಪಾಯಕಾರಿ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸುವುದು ಅಪರಾಧ. ಘಟನೆಗೆ ಸಂಬಂಧಿಸಿದಂತೆ ಮುಳಗುಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಎಸ್‌ಪಿ ಯತೀಶ್‌ ಎನ್‌. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.