ADVERTISEMENT

ಗದಗ ಉತ್ಸವದಲ್ಲಿ ಗ್ರಾಹಕರ ಸಂಭ್ರಮ

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಕೈಗಾರಿಕಾ ಪ್ರದರ್ಶನ ಮತ್ತು ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 13:42 IST
Last Updated 22 ಸೆಪ್ಟೆಂಬರ್ 2018, 13:42 IST
ಗದುಗಿನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿನ ಕೈಗಾರಿಕಾ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಖರೀದಿಯಲ್ಲಿ ತೊಡಗಿರುವ ಜನರು
ಗದುಗಿನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿನ ಕೈಗಾರಿಕಾ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಖರೀದಿಯಲ್ಲಿ ತೊಡಗಿರುವ ಜನರು   

ಗದಗ: ನಗರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿರುವ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳ ‘ಗದಗ ಉತ್ಸವ’ಕ್ಕೆ ಗ್ರಾಹಕರ ದಟ್ಟಣೆ ಹೆಚ್ಚುತ್ತಿದೆ.

ಮೇಳದಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಚನ್ನಪಟ್ಟಣ, ಶಿರಸಿ, ರಾಮನಗರ ಸೇರಿದಂತೆ ವಿವಿಧೆಡೆಯಿಂದ ವ್ಯಾಪಾರಿಗಳು ಕರಕುಶಲ, ಅಲಂಕಾರಿಕ, ಗೃಹ ಬಳಕೆಯ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮನೆ ಕಳ್ಳತನ ತಡೆಗೆ ಅಗತ್ಯವಿರುವ ಉಪಕರಣಗಳು, ಸೌರದೀಪಗಳು, ಮಸಾಜ್‌ ಯಂತ್ರಗಳು ಗ್ರಾಹಕರನ್ನು ಸೆಳೆಯುತ್ತಿವೆ.ಮಣಿ ಸರಗಳು, ಖಾದಿ ಉಡುಪು, ಮಕ್ಕಳ ಆಟದ ವಸ್ತುಗಳು, ಉಡುಪುಗಳು‌,ಸೌಂದರ್ಯವರ್ಧಕ ಸಾಧನಗಳು ಪ್ರಮುಖ ಆರ್ಕಷಣೆ. ಆಯುರ್ವೇದ ಉತ್ಪನ್ನಗಳು, ತರಕಾರಿ ಕತ್ತರಿಸುವ ಉಪಕರಣಗಳ ಮಾರಾಟ ಮಳಿಗೆಯಲ್ಲಿ ಜನದಟ್ಟಣೆ ಕಂಡುಬರುತ್ತಿದೆ. ವಿವಿಧ ವಿನ್ಯಾಸದ ಹಾಸಿಗೆ, ದಿಂಬುಗಳು, ನೆಲಹಾಸು ಲಭ್ಯವಿದೆ.

‘ಗದಗ ಉತ್ಸವದಲ್ಲಿ ಎರಡನೆಯ ಬಾರಿ ಭಾಗವಹಿಸುತ್ತಿದ್ದೇವೆ. ಬಟ್ಟೆಯಿಂದ ಸಿದ್ಧಪಡಿಸಿದ ವಿವಿಧ ಬ್ಯಾಗ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಹುಬ್ಬಳ್ಳಿಯಿಂದ ಬಂದಿದ್ದ ವ್ಯಾಪಾರಿ ಗಾಯಿತ್ರಿ ಕದಂ ಹೇಳಿದರು.

ADVERTISEMENT

‘ಈ ಬಾರಿ ಮೇಳದಲ್ಲಿ 90 ಮಳಿಗೆಗೆಗಳನ್ನು ತೆರೆಯಲಾಗಿದೆ. 70ಕ್ಕೂ ಹೆಚ್ಚು ಉದ್ಯಮ ಸಂಸ್ಥೆಗಳು ಭಾಗವಹಿಸಿವೆ. ಮೇಳವು ಸೆ.24 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10.30ರವರೆಗೆ ಮೇಳಕ್ಕೆ ಭೇಟಿ ನೀಡಬಹುದು.ವಾರಾಂತ್ಯದ ದಿನಗಳಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಭೇಟಿ ನಿಡುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಬಾಬಣ್ಣ ಶಾಬಾದಿಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.