ADVERTISEMENT

ನರೇಗಲ್ | ಒಣ ಬೇಸಾಯದ ಭೂಮಿಯಲ್ಲಿ ಸಮಗ್ರ ಕೃಷಿ

ಒಂದು ಎಕರೆಯಲ್ಲಿ ತೋಟಗಾರಿಕೆ ಬೆಳೆ: ಕೃಷಿಗೆ ಸೋದರನ ಸಹಕಾರ

​ಪ್ರಜಾವಾಣಿ ವಾರ್ತೆ
Published 23 ಮೇ 2025, 6:14 IST
Last Updated 23 ಮೇ 2025, 6:14 IST
ನರೇಗಲ್‌ ಹೋಬಳಿಯ ಮಾರನಬಸರಿ ಗ್ರಾಮದ ರೈತ ಅಂದಾನಯ್ಯ ಶಾಂತಗೇರಿಮಠ ಅವರು ತಮ್ಮ ಹೊಲದಲ್ಲಿ ಬೆಳೆದ ಚಿಕ್ಕುಹಣ್ಣಿನ ಗಿಡದ ಮುಂದೆ ನಿಂತಿರುವುದು
ನರೇಗಲ್‌ ಹೋಬಳಿಯ ಮಾರನಬಸರಿ ಗ್ರಾಮದ ರೈತ ಅಂದಾನಯ್ಯ ಶಾಂತಗೇರಿಮಠ ಅವರು ತಮ್ಮ ಹೊಲದಲ್ಲಿ ಬೆಳೆದ ಚಿಕ್ಕುಹಣ್ಣಿನ ಗಿಡದ ಮುಂದೆ ನಿಂತಿರುವುದು   

ನರೇಗಲ್:‌ ಹೋಬಳಿಯ ಮಾರನಬಸರಿ ಗ್ರಾಮದ ರೈತ ಅಂದಾನಯ್ಯ ರುದ್ರಯ್ಯ ಶಾಂತಗೇರಿಮಠ ಅವರು ಒಣ ಬೇಸಾಯದ ಭೂಮಿಯಲ್ಲಿ ಸಮಗ್ರ ಕೃಷಿಗೆ ಮುಂದಾಗಿದ್ದಾರೆ.

ಒಟ್ಟು 14 ಎಕರೆ ಕಪ್ಪು ಮಣ್ಣಿನ ಭೂಮಿಯಲ್ಲಿ 13 ಎಕರೆ ಒಣ ಬೇಸಾಯದ ಬೆಳೆಗಳನ್ನು ಹಾಗೂ 1 ಎಕರೆಯಲ್ಲಿ ಪೇರಲ, ಚಿಕ್ಕು, ನಿಂಬೆಹಣ್ಣು, ನೇರಳೆ, ಮಾವು, ತೆಂಗು, ಕರಿಬೇವಿವು ಬೆಳೆದಿದ್ದಾರೆ.

ಕೊಳವೆಬಾವಿಯಲ್ಲಿ ಬಿದ್ದಿರುವ ಅಲ್ಪ ನೀರನ್ನು ಕೃಷಿಗೆ ಬಳಸುತ್ತಿದ್ದಾರೆ. ಗಿಡಗಳಿಂದ ಬೀಳುವ ಎಲೆ, ಕಸಕಡ್ಡಿಯನ್ನೇ ಗೊಬ್ಬರವನ್ನಾಗಿ ಮಾಡಿಕೊಂಡು ಗಿಡಗಳಿಗೆ ಹಾಕುತ್ತಿದ್ದಾರೆ. ಉಳಿದ 13 ಎಕರೆ ಭೂಮಿಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ.

ADVERTISEMENT

ಕೃಷಿಯಲ್ಲಿ ಎದುರಿಸುವ ತಾಂತ್ರಿಕ ಸಮಸ್ಯೆಯ ನಡುವೆ ಕಡಿಮೆ ನೀರು ಬಳಸಿ ಅಧಿಕ ಇಳುವರಿ ಪಡೆಯುವ ಸಲುವಾಗಿ ದಿನವೂ ಶ್ರಮ ವಹಿಸುತ್ತಿದ್ದಾರೆ. ಇವರ ಸಮಗ್ರ ಕೃಷಿ ಪದ್ಧತಿಗೆ ಕುಟುಂಬದ ಸಹೋದರರು ಸಹಕಾರ ನೀಡುತ್ತಿದ್ದಾರೆ.

ಹೊಲದಲ್ಲಿ ಕೆಲಸ ಮಾಡಲು ಕಾರ್ಮಿಕರ ಸಮಸ್ಯೆ ಅಧಿಕವಾಗಿರುವ ಕಾರಣ ಕೆಲವೊಮ್ಮೆ ತೊಂದರೆಗಳು ಆಗುತ್ತಿವೆ. ಆದರೂ ಆಧುನಿಕ ಕಾಲಕ್ಕೆ ತಕ್ಕಂತೆ ಯಂತ್ರಗಳನ್ನು ಬಳಕೆಮಾಡಿಕೊಂಡು ಕೃಷಿ ಕಾಯಕ ಮುಂದುವರಿಸಿದ್ದಾರೆ.

‘ಎಲ್ಲಾ ಬೆಳೆಗಳಿಗೆ ಯಂತ್ರಗಳ ಉಪಯೋಗ ಲಾಭದಾಯಕ. ಆದರೆ ಹಿಂಗಾರಿನ ಕಡಲೆ ಬೆಳೆಗೆ ನಷ್ಟದಾಯಕವಾಗಿದೆ. ಕಡಲೆ ಬೆಳೆ ನೆಲದಿಂದ ಹೆಚ್ಚು ಎತ್ತರ ಬೆಳೆಯದ ಕಾರಣ ಕಟಾವು ಮಾಡುವಾಗ ಫಲ ಮಣ್ಣಿನ ಪಾಲಾಗುತ್ತಿದೆ ಹಾಗೂ ಬೆಲೆಯು ಸರಿಯಾಗಿ ಸಿಗುತ್ತಿಲ್ಲ. ಅದರ ನಡುವೆಯೂ ಅನೇಕ ರೀತಿಯ ಪ್ರಯೋಗಕ್ಕೆ ಮುಂದಾಗಿರುವ ಅಂದಾನಯ್ಯನವರ ಪ್ರಯತ್ನ ಶ್ಲಾಘನೀಯ’ ಎಂದು ಮಾರನಬಸರಿ ಗ್ರಾಮದ ಶರಣಪ್ಪ ನಿಂಗಪ್ಪ ಸಂಗಟಿ, ವೀರಣ್ಣ ಅಂದಪ್ಪ ಮರಡಿ ಹೇಳಿದರು.

ಪ್ರಯೋಗಾತ್ಮಕ ಕೃಷಿ ಮಾಡಲು ಕಾರ್ಮಿಕರ ಸಮಸ್ಯೆ ಹೆಚ್ಚುತ್ತಿದೆ. ಅದರ ನಡುವೆಯೂ ಸಹೋದರರ ಸಹಕಾರದಲ್ಲಿ ಸಮಗ್ರಕೃಷಿ ಪ್ರಯತ್ನ ಮಾಡುತ್ತಿದ್ದೇನೆ
ಅಂದಾನಯ್ಯ ಶಾಂತಗೇರಿಮಠ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.