ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ದವನದ ಹುಣ್ಣಿಮೆ ದಿನವಾದ ಶನಿವಾರ ರಾಮನ ಭಕ್ತ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹನುಮ ಜನ್ಮೋತ್ಸವದ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಗರದ ವಿವಿಧ ಹನುಮ ದೇವಸ್ಥಾನಗಳಲ್ಲಿ ‘ಗದೆ ಪೂಜೆ’ ನೆರವೇರಿಸಲಾಯಿತು.
ಮಾರುತಿ ದೇವಸ್ಥಾನಗಳಿಗೆ ತಳಿರು-ತೋರಣಗಳಿಂದ ಸಿಂಗರಿಸಿ, ಕೇಸರಿ ಧ್ವಜಗಳನ್ನು ಕಟ್ಟಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕೇಸರಿ ನಂದನ, ವಾಯುಪುತ್ರನಿಗೆ ಮಹಾಭಿಷೇಕ, ರುದ್ರಾಭಿಷೇಕ, ತೊಟ್ಟಿಲೋತ್ಸವ, ಹೋಮ-ಹವನ, ತುಳಸಿ ಅರ್ಚನೆ ಹಾಗೂ ಮಹಾ ಮಂಗಳಾರತಿ ನಡೆದವು.
ಹನುಮನ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ಹೂವು ಹಣ್ಣು, ಕಾಯಿ ಅರ್ಪಿಸಿ, ತಮ್ಮ ಬೇಡಿಕೆಗಳ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಧ್ಯಾಹ್ನ ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ನಡೆಯಿತು.
ನಗರದ ಇತಿಹಾಸ ಪ್ರಸಿದ್ಧ ಜೋಡಮಾರುತಿ ದೇವಸ್ಥಾನ, ವಿವೇಕಾನಂದ ನಗರದ ವೀರಾಂಜನೇಯ ದೇವಸ್ಥಾನ, ನರಸಾಪುರದ ಗುಂಡದ ಮಾರುತಿ ಗುಡಿ, ಬಸವೇಶ್ವರ ನಗರದ ಜೋಡ ಹನುಮಂತದೇವರ ಗುಡಿ, ಗಂಗಾಪುರ ಪೇಟೆಯ ಮಾರುತಿ ಮಂದಿರ, ಹೆಲ್ತ್‌ಕ್ಯಾಂಪ್‍ನ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.
ಇಲ್ಲಿನ ರೈಲ್ವೆ ನಿಲ್ದಾಣ ಸಮೀಪದ ಮಾರುತಿ ಮಂದಿರ, ಶನೈಶ್ವರ ದೇವಸ್ಥಾನ, ಹುಡ್ಕೋ ಕಾಲೊನಿಯ ಬಯಲು ಆಂಜನೇಯ ದೇವಸ್ಥಾನ, ಶರಣ ಬಸವೇಶ್ವರ ನಗರದ ಆಂಜನೇಯ ಗುಡಿ, ಗಾಂಧಿನಗರದ ಮಾರುತಿ ದೇವಸ್ಥಾನಗಳಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.