ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಹಾಗೂ ಗಂಗಾಪುರ ಗ್ರಾಮಗಳ ಬಳಿ ಕಳೆದ 15-20 ದಿನಗಳಿಂದ ಅಪಾರ ಪ್ರಮಾಣದ ಶುದ್ಧ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಅಕ್ಕಪಕ್ಕದ ಜಮೀನುಗಳು ನೀರಿನಿಂದ ಆವೃತ್ತವಾಗತೊಡಗಿವೆ.
ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಳಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸುವ ಬೃಹತ್ ಪೈಪುಗಳ ವಾಲ್ ಗಳು ಹಾಳಾಗಿದ್ದು, ಅವುಗಳ ಮೂಲಕ ನಿತ್ಯ ಲಕ್ಷಾಂತರ ಲೀಟರ್ ಶುದ್ಧ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಲಿದೆ.
'ನೀರು ಅಮೂಲ್ಯ, ಅದನ್ನು ಮಿತವಾಗಿ ಬಳಸಿ' ಎಂದು ರಾಜ್ಯ ನೀರು ಸರಬರಾಜು ಇಲಾಖೆಯು ಹೇಳುತ್ತಲಿದೆ. ಆದರೆ ಇಲ್ಲಿಯ ಅಧಿಕಾರಿಗಳು ನೀರು ವ್ಯರ್ಥವಾಗುವುದನ್ನು ಕಂಡು ಕಾಣದಂತೆ ಸುಮ್ಮನಿರುವುದು ಅಕ್ಕಪಕ್ಕದ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಗದಗ-ಬೆಟಗೇರಿ ಹಾಗೂ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ವರ್ಷದುದ್ದಕ್ಕೂ ಹಮ್ಮಿಗಿ ಗ್ರಾಮದ ಬಳಿಯ ತುಂಗಭ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪ್ರಸ್ತುತ ತುಂಗಭದ್ರಾ ನದಿಯಲ್ಲಿ ಈಗಲೂ ಸಾಕಷ್ಟು ನೀರು ಹರಿಯುತ್ತಿರುವುದರಿಂದ ಸಧ್ಯ ನೀರು ಪೂರೈಕೆಯಲ್ಲಿ ಯಾವ ವ್ಯತ್ಯೇಯವು ಇಲ್ಲ. ಕಳೆದ ವರ್ಷ ಮೇ ತಿಂಗಳಿನಲ್ಲಿ ಬ್ಯಾರೇಜ್ ಸಂಪೂರ್ಣ ಬರಿದಾಗಿ ಕುಡಿಯುವ ನೀರು ಪೂರೈಕೆಗೆ ತೀವ್ರ ಸಮಸ್ಯೆಯಾಗಿತ್ತು.
ನದಿಯಲ್ಲಿ ಸಾಕಷ್ಟು ನೀರಿರಲಿ, ಇಲ್ಲದಿರಲಿ ನೀರು ವ್ಯರ್ಥವಾಗಿ ಹರಿಯುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಇಂತಹ ಸಂಗತಿಗಳನ್ನು ಅಧಿಕಾರಿಗಳು ಗಂಭೀರವಾಗಿ ತಗೆದುಕೊಳ್ಳದಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಪೈಪಿನ ವಾಲ್ ಮೇಲ್ಭಾಗದಲ್ಲಿ ಇರುವುರಿಂದ ದುಷ್ಕರ್ಮಿಗಳು ಅವುಗಳನ್ನು ಪದೇ ಪದೇ ಹಾಳುಮಾಡುತ್ತಾರೆ. ಇದರಿಂದ ಇಂತಹ ಅವಘಢ ಸಂಭವಿಸುತ್ತಿವೆ. ಈಗಾಗಲೇ ಹಲವು ಬಾರಿ ದುರಸ್ತಿ ಮಾಡಲಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು
-ಹುಚ್ಚಿರೇಶ ಬಂಡಿವಡ್ಡರ ನೀರು ಸರಬರಾಜು ಇಲಾಖೆ ಹಿರಿಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.