ADVERTISEMENT

ಲಕ್ಷ್ಮೇಶ್ವರ ರಾಮಗಿರಿ ಗ್ರಾಮ ಪಂಚಾಯ್ತಿಗೆ 2ನೇ ಬಾರಿ ‘ಗಾಂಧಿಗ್ರಾಮ’ ಪುರಸ್ಕಾರ

ಲಕ್ಷ್ಮೇಶ್ವರ ರಾಮಗಿರಿ ಗ್ರಾಮ ಪಂಚಾಯ್ತಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 12:38 IST
Last Updated 30 ಸೆಪ್ಟೆಂಬರ್ 2020, 12:38 IST
ಲಕ್ಷ್ಮೇಶ್ವರ ಸಮೀಪದ ರಾಮಗಿರಿ ಗ್ರಾಮ ಪಂಚಾಯ್ತಿ
ಲಕ್ಷ್ಮೇಶ್ವರ ಸಮೀಪದ ರಾಮಗಿರಿ ಗ್ರಾಮ ಪಂಚಾಯ್ತಿ   

ಲಕ್ಷ್ಮೇಶ್ವರ: ಸಮೀಪದ ರಾಮಗಿರಿ ಗ್ರಾಮ ಪಂಚಾಯ್ತಿ 2019-20ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆ ಆಗಿದೆ. 2017-18ನೇ ಸಾಲಿನಲ್ಲಿಯೂ ಪುರಸ್ಕಾರ ಲಭ್ಯವಾಗಿತ್ತು.

ಈ ಕುರಿತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಗದೀಶ ಕುರುಬರ ಮಾಹಿತಿ ನೀಡಿ, ‘ನಮ್ಮ ಪಂಚಾಯ್ತಿ ವ್ಯಾಪ್ತಿಗೆ ರಾಮಗಿರಿ ಮತ್ತು ಬಸಾಪುರ ಗ್ರಾಮಗಳು ಒಳಪಡುತ್ತವೆ. 10 ಜನ ಚುನಾಯಿತ ಸದಸ್ಯರನ್ನು ಹೊಂದಿದ್ದು 3,138 ಜನಸಂಖ್ಯೆ ಇದೆ. 2019-20ರಲ್ಲಿ ಗ್ರಾಮ ಪಂಚಾಯ್ತಿ ನಿಗದಿತ ಸಮಯದಲ್ಲಿ ಎಲ್ಲ ಸಭೆಗಳನ್ನು ನಡೆಸಿ ಜನರ ಕುಂದು ಕೊರತೆ ಬಗೆ ಹರಿಸಿದೆ. ‘ನಮ್ಮ ಗ್ರಾಮ’ ನಮ್ಮ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ಇ-ಗ್ರಾಮ ಸ್ವರಾಜ್ ತಂತ್ರಾಂಶಗಳ ಮೂಲಕ ಶೇ 100 ರಷ್ಟು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ’ ಎಂದರು.

ಪಂಚಾಯ್ತಿ ವ್ಯಾಪ್ತಿಯಲ್ಲಿನ ಎಲ್ಲ ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ರೋಗ ನಿರೋಧಕ ಲಸಿಕೆ ಹಾಕಲಾಗಿದ್ದು ಶಾಲೆಗಳಲ್ಲಿ ಉತ್ತಮ ಶೌಚಾಲಯ ಹಾಗೂ ಸುಸಜ್ಜಿತ ಕೊಠಡಿಗಳು ಇವೆ.

ADVERTISEMENT

ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರ್ಮಿಕರಿಗೆ ಕೆಲಸ ನೀಡಿ ಕೂಲಿ ಹಣ ಪಾವತಿಸಲಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತವಾಗಿದೆ. ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳಲ್ಲಿ ಶೇ.80 ರಷ್ಟು ಮನೆ ನಿರ್ಮಾಣದ ಪ್ರಗತಿ ಸಾಧಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗ್ರಾಮಕ್ಕೆ ನದಿ ನೀರು ಪೂರೈಕೆ ಆಗುತ್ತಿದ್ದು 2 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ ಎಂದರು.

‘2019-20ರ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು, ಆಡಳಿತ ಅಧಿಕಾರಿಗಳ ಸಲಹೆ, ಸೂಚನೆಗಳಿಂದಾಗಿ 2ನೇ ಬಾರಿಗೆ ಪುರಸ್ಕಾರ ಪಡೆಯಲು ಸಾಧ್ಯವಾಗಿದ್ದು, ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪುರಸ್ಕಾರ ನೀಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.