ADVERTISEMENT

ಸಾರ್ವಜನಿಕರ ಜೀವದ ಜತೆ ಸರ್ಕಾರದ ಚೆಲ್ಲಾಟ: ಶಾಸಕ ಡಾ. ಚಂದ್ರು ಲಮಾಣಿ ವಾಗ್ಧಾಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 15:59 IST
Last Updated 31 ಮೇ 2025, 15:59 IST
ಜನೌಷಧ ಕೇಂದ್ರ ಬಂದ್‌ ಮಾಡಲು ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಗದಗ ಜಿಲ್ಲಾ ಘಟಕದ ವತಿಯಿಂದ ಶನಿವಾರ ಮೌನ ಪ್ರತಿಭಟನೆ ನಡೆಯಿತು
ಜನೌಷಧ ಕೇಂದ್ರ ಬಂದ್‌ ಮಾಡಲು ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಗದಗ ಜಿಲ್ಲಾ ಘಟಕದ ವತಿಯಿಂದ ಶನಿವಾರ ಮೌನ ಪ್ರತಿಭಟನೆ ನಡೆಯಿತು   

ಗದಗ: ‘ಮುಕ್ತ ಮಾರುಕಟ್ಟೆ ಬೆಲೆಗಳಿಗಿಂತ ಶೇ 50ರಿಂದ 90ರಷ್ಟು ಅಗ್ಗದ ದರದಲ್ಲಿ ಔಷಧಿ ಲಭ್ಯವಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಸಾರ್ವಜನಿಕರ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆ’ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.

ಬಿಜೆಪಿ ಗದಗ ಜಿಲ್ಲಾ ಘಟಕ, ಗದಗ ನಗರ ಹಾಗೂ ಗದಗ ಗ್ರಾಮೀಣ ಮಂಡಲ ವತಿಯಿಂದ ಶನಿವಾರ ಜಿಲ್ಲಾ ಆಸ್ಪತ್ರೆ ಎದುರು ನಡೆದ ಮೌನ ಪ್ರತಿಭಟನೆಯಲ್ಲಿ ಮಾತನಾಡಿದರು.

‘ರೋಗ ಯಾವುದೇ ಇರಲಿ ಪೂರೈಕೆಯಲ್ಲಿರುವ ಔಷಧಿಯನ್ನೇ ವೈದ್ಯರು ಬರೆದು ಕೊಡುವ ಅನಿವಾರ್ಯ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಅವಶ್ಯಕ ಔಷಧಿಗಳನ್ನು ಬೇಡಿಕೆಗೆ ತಕ್ಕಂತೆ ಒದಗಿಸದೇ ಒಂದೇ ತೆರನಾದ ಔಷಧಗಳನ್ನು ಪೂರೈಸುತ್ತಿರುವುದು ದುರ್ದೈವದ ಸಂಗತಿ. ಹೀಗಾದರೆ ರೋಗಿಯ ಕಾಯಿಲೆ ವಾಸಿಯಾಗುವುದಾದರೂ ಹೇಗೆ?’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಜನೌಷಧ ಕೇಂದ್ರಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸ್ವಾಮ್ಯದ ಸಂಸ್ಥೆಗಳೇ ಔಷಧಿ ಪೂರೈಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಪ್ರಮಾಣೀಕೃತವಾಗಿವೆ. ಮಧುಮೇಹ, ಹೃದಯ ಸಂಬಂಧಿ ಸೇರಿದಂತೆ ದೀರ್ಘ ಅವಧಿಯ ಕಾಯಿಲೆಗಳ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ವಿತರಣೆ ಆಗದಿದ್ದಾಗ ರೋಗಿಯು ಅಗ್ಗದ ದರದಲ್ಲಿ ಜನೌಷಧ ಕೇಂದ್ರಗಳಲ್ಲಿ ಖರೀದಿಸುತ್ತಾರೆ.  ಆಸ್ಪತ್ರೆಗಳಲ್ಲಿ ಎಲ್ಲಾ ಔಷಧಿ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿ; ಜತೆಗೆ ಜನೌಷಧ ಕೇಂದ್ರಗಳನ್ನೂ ಸ್ಥಗಿತಗೊಳಿಸಬಾರದು’ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಎಂ.ಎಸ್.ಕರಿಗೌಡ್ರ ಮಾತನಾಡಿ, ‘ಔಷಧಿ ಲಾಬಿಗೆ ಮಣಿದ ರಾಜ್ಯ ಸರ್ಕಾರ ಹಣ ಮಾಡಿಕೊಳ್ಳುವ ಉದ್ದೇಶದಿಂದ ಇಂತಹ ಹೇಯ ಕೃತ್ಯಕ್ಕೆ ಮುಂದಾಗಿದೆ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮುಖಂಡರಾದ ಶ್ರೀಪತಿ ಉಡುಪಿ, ರವಿ ದಂಡಿನ, ಬಸವಣ್ಣೆಪ್ಪ ಚಿಂಚಲಿ, ಎಂ.ಎಂ.ಹಿರೇಮಠ, ಜಗನ್ನಾಥಸಾ ಭಾಂಡಗೆ, ನಗರಸಭಾ ಸದಸ್ಯರಾದ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ ಮಾತನಾಡಿದರು.

ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ವಿನಾಯಕ ಮಾನ್ವಿ, ಅಶೋಕ ಸಂಕಣ್ಣವರ, ವಿದ್ಯಾವತಿ ಗಡಗಿ, ಲಕ್ಷ್ಮಿ ಕಾಕಿ, ವಿಜಯಲಕ್ಷ್ಮಿ ಮಾನ್ವಿ, ಸುಧೀರ ಕಾಟಿಗೇರ, ನಾಗರಾಜ ತಳವಾರ, ಭದ್ರೇಶ ಕುಸಲಾಪುರ, ವೈ.ಪಿ.ಅಡನೂರ, ಮಂಜುನಾಥ ಮುಳಗುಂದ, ಬಿ.ಎಸ್.ಚಿಂಚಲಿ, ನಿಂಗಪ್ಪ ಹುಗ್ಗಿ, ಫಕ್ಕಿರೇಶ ರಟ್ಟಿಹಳ್ಳಿ, ವಿನೋದ ಹಂಸನೂರ ಇದ್ದರು.

ಜನರ ರಕ್ತ ಹೀರುತ್ತಿರುವ ರಾಜ್ಯ ಸರ್ಕಾರ:

‘ಜನಹಿತ ಕಾಪಾಡಬೇಕಾದ ಸರ್ಕಾರವೇ ಜನರ ರಕ್ತ ಹೀರುತ್ತಿರುವುದು ನಾಚಿಕೆಯ ಸಂಗತಿ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಟೀಕಿಸಿದರು. ‘ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಹೆಚ್ಚಾಗಿ ಬಡವರು ಆರ್ಥಿಕ ಅನಕೂಲ ಇಲ್ಲದವರು. ಅಂತವರ ಬವಣೆ ಅರಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು ದೇಶದಾದ್ಯಂತ ಹದಿನೈದು ಸಾವಿರಕ್ಕಿಂತಲೂ ಹೆಚ್ಚು ಕೇಂದ್ರಗಳಿವೆ. ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಹಾಗಾಗಿ ಮೊದಲಿನಂತೆ ಜನೌಷಧ ಕೇಂದ್ರ ಪ್ರಾರಂಭಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.