ADVERTISEMENT

ಹೆಸರುಕಾಳು:ಕೊನೆಗೂ ಖರೀದಿ ಆರಂಭ

ಮಾರಾಟಕ್ಕೆ ಎಪಿಎಂಸಿಗೆ ತರುತ್ತಿರುವ ರೈತರು;ಆವಕದಲ್ಲಿ ಹೆಚ್ಚಳ

ಜೋಮನ್ ವರ್ಗಿಸ್
Published 4 ಅಕ್ಟೋಬರ್ 2018, 12:04 IST
Last Updated 4 ಅಕ್ಟೋಬರ್ 2018, 12:04 IST
ರೈತರು ಮಾರಾಟಕ್ಕಾಗಿ ಗದಗ ಎಪಿಎಂಸಿಗೆ ತಂದಿರುವ ಹೆಸರುಕಾಳು
ರೈತರು ಮಾರಾಟಕ್ಕಾಗಿ ಗದಗ ಎಪಿಎಂಸಿಗೆ ತಂದಿರುವ ಹೆಸರುಕಾಳು   

ಗದಗ:ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ, ಜಿಲ್ಲೆಯಲ್ಲಿ ಹೆಸರುಕಾಳು ಖರೀದಿ ಕೊನೆಗೂ ಪ್ರಾರಂಭಗೊಂಡಿದ್ದು ರೈತರು ನಿಟ್ಟುಸಿರು ಬಿಡುವಂತಾಗಿದೆ.ಅ.1ರಿಂದ ಜಿಲ್ಲೆಯ 15 ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಇದುವರೆಗೆ ಒಟ್ಟು 958 ರೈತರಿಂದ 3,824 ಕ್ವಿಂಟಲ್‌ ಹೆಸರುಕಾಳು ಖರೀದಿಸಲಾಗಿದೆ.

‘ಎಂಎಸ್‌ಪಿ’ಯಡಿ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಖರೀದಿ ಕೇಂದ್ರಗಳನ್ನು ತರೆಯಲಾಗಿದೆ.ಒಟ್ಟು 15,417ರೈತರು ಮಾರಾಟಕ್ಕಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಮುಗಿದು ಮೂರು ವಾರ ಕಳೆದರೂ, ತಾಂತ್ರಿಕ ಸಮಸ್ಯೆಯಿಂದ ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿರಲಿಲ್ಲ. ಹೀಗಾಗಿ ರೈತರ ಆತಂಕ ಹೆಚ್ಚಿತ್ತು.

‘ಗದಗ, ಶಿರಹಟ್ಟಿ, ಮುಂಡರಗಿ ಮತ್ತು ರೋಣ ತಾಲ್ಲೂಕುಗಳಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಶೀಘ್ರದಲ್ಲೇ ನರಗುಂದ ತಾಲ್ಲೂಕಿನಲ್ಲಿ ಖರೀದಿ ಪ್ರಾರಂಭಿಸಲಾಗುವುದು’ ಎಂದು ಖರೀದಿ ಏಜೆನ್ಸಿಯಾಗಿರುವ ಸಹಕಾರ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಾಫ್ಟ್‌ವೇರ್‌ ಸಮಸ್ಯೆಯಿಂದಾಗಿ ರೈತರ ಹೆಸರು ನೋಂದಣಿಗೆ ಅಡ್ಡಿಯಾಗಿತ್ತು. ಹೀಗಾಗಿ ಈ ಅವಧಿಯನ್ನೂ ಸೆ.16ರವರೆಗೆ ವಿಸ್ತರಿಸಲಾಗಿತ್ತು. ಸರ್ಕಾರದ ನಿಯಮಾನುಸಾರ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಅ.8 ಕೊನೆಯ ದಿನ. ಆದರೆ, ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ತಡವಾಗಿ ಪ್ರಾರಂಭವಾದ್ದರಿಂದ, ಈ ಅವಧಿಯನ್ನೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಮಹಾಮಂಡಳದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.