ADVERTISEMENT

ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿ; ಜನಜಾಗೃತಿಗಾಗಿ ಪಾದಯಾತ್ರೆ: ಎಚ್‌.ಕೆ.ಪಾಟೀಲ

ಶಾಸಕ ಎಚ್‌.ಕೆ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 5:05 IST
Last Updated 8 ಜನವರಿ 2022, 5:05 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿದ್ದು ಅದನ್ನು ಮೇಲೆಬ್ಬಿಸುವ ಹಾಗೂ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್‌ ಮೇಕೆದಾಟು ಹೋರಾಟ ಆರಂಭಿಸಿದೆ. ಯಾರು ಯಾವುದೇ ಬಗೆಯ ನಿರ್ಬಂಧ ಹೇರಿದರೂ ಪಾದಯಾತ್ರೆ ನಡೆದೇ ನಡೆಯುತ್ತದೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

ಶುಕ್ರವಾರ ಗದುಗಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಜನಜಾಗೃತಿ ಮೂಡಿಸುವುದು ಎಲ್ಲ ರಾಜಕೀಯ ಪಕ್ಷಗಳ ಆದ್ಯ ಕರ್ತವ್ಯ. ಇಂತಹ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಸಹಕರಿಸಬೇಕೇ ವಿನಾ ಹತ್ತಿಕ್ಕುವ ಪ್ರಯತ್ನ ಮಾಡಬಾರದು’ ಎಂದರು.

‘ಮೇಕೆದಾಟು ಯೋಜನೆ ಕರ್ನಾಟಕದ್ದು, ಅದು ಆಗಲೇಬೇಕು ಎಂಬುದು ನಮ್ಮ ಛಲ. ಅದೇ ನಮ್ಮ ಈಗಿನ ಹೋರಾಟ. ಕಾವೇರಿ ವಿವಾದದಲ್ಲಿ ನಮ್ಮ ಪಾಲಿನ ನೀರು ಎಷ್ಟು ಎಂಬುದು ಈಗಾಗಲೇ ನಿರ್ಣಯ ಆಗಿದೆ. ನಮಗೆ ಬಂದಿರುವ ಪಾಲನ್ನು ಕುಡಿಯುವ ನೀರಿಗಾಗಿ, ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಬೇಕು ಎಂಬ ಯೋಜನೆಯನ್ನು ತುಂಬ ಹಿಂದೆಯೇ ರೂಪಿಸಲಾಗಿದೆ. ಈಗಿನ ವಿನೂತನ ತಂತ್ರಜ್ಞಾನ ಬಳಸಿ ಅಲ್ಲಿ 800 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಕೂಡ ಉತ್ಪಾದಿಸಬಹುದು’ ಎಂದು ಹೇಳಿದರು.

ADVERTISEMENT

‘ಕೋವಿಡ್‌ ಮಾರ್ಗಸೂಚಿ ಅನುಸಾರವೇ ಪಾದಯಾತ್ರೆ ಮಾಡುತ್ತೇವೆ ಎಂದು ಮುಖಂಡರಾದ ಡಿ.ಕೆ.ಶಿವಕುಮಾರ್‌, ಸಿದ್ದರಾಯಮ್ಯ ಅವರು ಕೂಡ ಸ್ಪಷ್ಟಪಡಿಸಿದ್ದಾರೆ. ಮಾರ್ಗಸೂಚಿ ಪಾಲಿಸಿ ಪಾದಯಾತ್ರೆ ಮಾಡಿದರೆ ಯಾವುದೇ ತೊಂದರೆಯಿಲ್ಲ. ಇದು ನಮ್ಮ ನಿಲುವು ಕೂಡ ಹೌದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.