ಗದಗ: ‘ಮಾನವ ಹಕ್ಕುಗಳು ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯ ಹೃದಯಭಾಗವಾಗಿವೆ. ಭಾರತದಲ್ಲಿನ ರಾಜ್ಯ ನೀತಿ ನಿರ್ದೇಶಕ ತತ್ವಗಳು, 1993ರ ಮಾನವ ಹಕ್ಕುಗಳ ಕಾಯ್ದೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಸ್ಥಾಪನೆಯು ಈ ನಿಟ್ಟಿನಲ್ಲಿ ಮಹತ್ವಪೂರ್ಣವಾದ ಹೆಜ್ಜೆಗಳಾಗಿವೆ’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಲ್ಲಿ ಈಚೆಗೆ ನಡೆದ ‘ಕವಲು ದಾರಿಯಲ್ಲಿ ಮಾನವ ಹಕ್ಕುಗಳು: ಭಾರತ ಹಾಗೂ ಪಶ್ಚಿಮ’ ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಬಡತನ ನಿರ್ಮೂಲನೆಯೂ ಮಾನವ ಹಕ್ಕುಗಳ ಭದ್ರತೆಗೆ ಸಹಕಾರಿಯಾಗಿದ್ದು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಈ ಉದ್ದೇಶದ ತಾತ್ವಿಕ ಆಧಾರವನ್ನೂ ಬಲಪಡಿಸುತ್ತಿವೆ.ಪಂಚ ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳಾಗಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಹೇಳಿದರು.
‘ಕಾನೂನು ನಿಯಮಗಳು, ಆಡಳಿತಾತ್ಮಕ ವಿಷಯ, ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ರಕ್ಷಣೆ ಜಾಗೃತಿಗಾಗಿ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮದ ಅಗತ್ಯವಿದೆ. ಸಮಾಜದಲ್ಲಿ ಜವಾಬ್ದಾರಿ ನಾಗರಿಕರಾಗಿ ನಾವು ನಡೆದುಕೊಳ್ಳುತ್ತಿದ್ದೇವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ’ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಮಾನವ ಹಕ್ಕುಗಳು ಸ್ಥಳ, ಸಮುದಾಯಗಳ ಅಭಿವೃದ್ಧಿಗಾಗಿ ಅತಿ ಅವಶ್ಯಕವಾಗಿವೆ ಎಂದು ಹೇಳಿದರು.
ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರ ಸಂಕಿರಣದಲ್ಲಿ ಪ್ರೊ. ಸಿ.ಎಸ್.ಪಾಟೀಲ, ಆರ್.ಬಿ.ಧರ್ಮಗೌಡರ, ಪ್ರೊ. ಎನ್.ದಶರಥ, ಹಣಕಾಸು ಅಧಿಕಾರಿ ಪ್ರಶಾಂತ್ ಜೆ.ಸಿ. ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ರಾಜ್ಯದಲ್ಲಿ ಮಾನವ ಹಕ್ಕುಗಳ ನ್ಯಾಯಾಲಯ ಸ್ಥಾಪಿಸಿ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಿದೆ. ಹಕ್ಕುಗಳ ಉಲ್ಲಂಘನೆಗಳನ್ನು ತಡೆದು ಮೂಲಭೂತ ಹಕ್ಕುಗಳ ರಕ್ಷಣೆಯೇ ನ್ಯಾಯಾಲಯ ಉದ್ದೇಶವಾಗಿದೆಎಚ್.ಕೆ.ಪಾಟೀಲ ಸಚಿವ
ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ನಿಖರವಾದ ಜ್ಞಾನ ಮತ್ತು ಜವಾಬ್ದಾರಿಯ ಅರಿವು ಮೂಡಿಸುವ ಕೆಲಸ ಆಗಬೇಕಿದೆಅಶೋಕ ಜಿ. ನಿಜಗಣ್ಣವರ ಕರ್ನಾಟಕ ಕಾನೂನು ಆಯೋಗದ ಸದಸ್ಯ
ಪಾಶ್ಚಾತ್ಯ ತತ್ವ ಚಿಂತನೆಗೂ ಹತ್ತಿರ
‘ಮಾನವ ಹಕ್ಕುಗಳ ಪರಿಕಲ್ಪನೆ ಭಾರತೀಯ ಪರಂಪರೆಗೂ ಪಾಶ್ಚಾತ್ಯ ತತ್ವ ಚಿಂತನೆಗೂ ಹತ್ತಿರವಾಗಿದೆ’ ಎಂದು ವಿಶ್ರಾಂತ ನ್ಯಾಯಮೂರ್ತಿ ಡಾ.ಅಶೋಕ ಬಿ. ಹಿಂಚೇಗೇರಿ ಹೇಳಿದರು. ‘ರಾಮಾಯಣದಲ್ಲಿಯೂ ಮಾನವೀಯತೆ ಮತ್ತು ಮಾನವ ಹಕ್ಕುಗಳ ಪ್ರಾತ್ಯಕ್ಷತೆ ಕಾಣಬಹುದು. ಭಾರತದ ಸಾಂಸ್ಕೃತಿಕ ಪಾಠಗಳಲ್ಲಿ ಸಹಜವಾಗಿ ಹಕ್ಕು ಮತ್ತು ಕರ್ತವ್ಯಗಳ ಸಮ್ಮಿಶ್ರಣವಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.