ADVERTISEMENT

ಗದಗ: ಭಾವೈಕ್ಯ ನಾಡಿನಲ್ಲಿ ಭ್ರಾತೃತ್ವದ ರಂಜಾನ್

ಸಾಮರಸ್ಯದ ಪ್ರತೀಕವಾಗಿರುವ ಜಗದ್ಗುರು ಫಕ್ಕೀರೇಶ್ವರರ ಮಠ

​ಪ್ರಜಾವಾಣಿ ವಾರ್ತೆ
Published 2 ಮೇ 2022, 3:45 IST
Last Updated 2 ಮೇ 2022, 3:45 IST
ಶಿರಹಟ್ಟಿಯ ಫಕೀರೇಶ್ವರ ಮಠದಲ್ಲಿನ ನಗಾರಿಖಾನೆ
ಶಿರಹಟ್ಟಿಯ ಫಕೀರೇಶ್ವರ ಮಠದಲ್ಲಿನ ನಗಾರಿಖಾನೆ   

ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಎಂದ ಕೂಡಲೇ ಎಲ್ಲರ ಕಣ್ಣ ಮುಂದೆ ಬರುವುದು ಇಲ್ಲಿನ ಜಗದ್ಗುರು ಫಕ್ಕೀರೇಶ್ವರರ ಮಠ. ಇದು ಸರ್ವಧರ್ಮ ಸಮನ್ವಯ ಹಾಗೂ ಕೋಮು ಸೌಹಾರ್ದತೆಯ ಮಠವಾಗಿ ಇಡೀ ದೇಶದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ಭಾವೈಕ್ಯದ ನೆಲದಲ್ಲಿ ಪ್ರತಿಯೊಂದು ಹಬ್ಬವನ್ನೂ ಹಿಂದೂ– ಮುಸ್ಲಿಮರು ಸೇರಿ ಆಚರಿಸುತ್ತಿದ್ದಾರೆ.

ಜ.ಫಕೀರೇಶ್ವರರ ಮಠ ಜ.ಫಕ್ಕೀರೇಶ್ವರ ಸುಕ್ಷೇತ್ರ ಹಿಂದೂ ಮುಸ್ಲಿಮರ ಸಾಮರಸ್ಯದ ಪ್ರತೀಕ. ಉಭಯ ಧರ್ಮಗಳ ಸಂಸ್ಕೃತಿ ಸಂಕೇತಗಳನ್ನು ಈ ಮಠದ ಎಲ್ಲ ಭಾಗದಲ್ಲಿಯೂ ಗುರುತಿಸಬಹುದು. ಹೆಸರೇ ಸೂಚಿಸುವಂತೆ ಫಕ್ಕೀರ ಮತ್ತು ಈಶ್ವರರ ಸಂಗಮವಾಗಿ ಫಕ್ಕೀರೇಶ್ವರರು ವೈರಾಗ್ಯಶಾಲಿಗಳು, ಪವಾಡ ಪುರುಷರಾಗಿ ಸರ್ವಧರ್ಮ ಸಮನ್ವರಾಗಿ ಹಿಂದೂ ಮುಸ್ಲಿಮರಲ್ಲಿ ಭಾವೈಕ್ಯತೆಯನ್ನು ಶಿರಹಟ್ಟಿಯ ನೆಲದಲ್ಲಿ ಗಟ್ಟಿಯಾಗಿ ನೆಲೆಸುವಂತೆ ಮಾಡಿದ್ದಾರೆ.

ಮಾಬುಸುಬಾನಿ ದರ್ಗಾ ಫಕೀರೇಶ್ವರ ವಾಣಿಯನ್ನು ಪಾಲಿಸುತ್ತಾ ಬಂದ ಭಕ್ತರು ವರ್ಷಕ್ಕೊಮ್ಮೆ ನಡೆಯುವ ಮಾಬುಸುಬಾನಿ ದರ್ಗಾದ ಉರುಸು ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದಿದೆ. ಗಂಧ, ತವಾಬ್, ಉರುಸಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಆಚರಿಸುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. ಉರುಸಿನ ಕೊಬರಿ ಸುಡುವ ಸಂದರ್ಭದಲ್ಲಂತೂ ಸಹೋದರತೆಯಿಂದ ಪಾಲ್ಗೊಳ್ಳುವುದನ್ನು ನೋಡಲು ಎರಡು ಕಣ್ಣು ಸಾಲದಂತಿರುತ್ತದೆ.

ADVERTISEMENT

ರಂಜಾನ್ ರೋಜಾ ಹಾಗೂ ಫಕೀರೇಶ್ವರ ಮಠ ಪೂರ್ವಜರ ಕಾಲದಲ್ಲಿ ಫಕೀರೇಶ್ವರ ಮಠದಲ್ಲಿ ಬೆಳಿಗ್ಗೆ 5ಕ್ಕೆ ನಗಾರಿ ಬಡಿಯುತ್ತಿದ್ದಂತೆ ಮುಸ್ಲಿಂ ಬಾಂಧವರ ರೋಜಾ ಆರಂಭವಾಗುತ್ತಿತ್ತು. ಬಡಿಯುವ ಮುಂಚಿತವಾಗಿ ಆಹಾರವನ್ನು ಸೇವಿಸಿ ನಗಾರಿಯ ಶಬ್ದ ನಿಂತ ಕೂಡಲೇ ಕಟ್ಟುನಿಟ್ಟಿನ ರೋಜಾ ಪ್ರಾರಂಭವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಸೀದಿಯಲ್ಲಿನ ಧ್ವನಿವರ್ಧಕದ ಪ್ರೇರೇಪಣೆಯಿಂದ ರಂಜಾನ್ ರೋಜಾ ಪ್ರಾರಂಭ ಮಾಡುತ್ತಿದ್ದಾರೆ. ಆದರೆ ರೋಜಾ ಹಿಡಿದ ತಕ್ಷಣ ಮಠಕ್ಕೆ ಭೇಟಿ ನೀಡಿ ಕರ್ತೃ ಗದ್ದುಗೆ ಹಾಗೂ ನಗಾರಿಖಾನೆಯ ಆಶಿರ್ವಾದ ಪಡೆದುಕೊಳ್ಳುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ.

ಮುಸ್ಲಿಮರ ನಂಬಿಕೆಯ ಪ್ರಕಾರ, ಪವಿತ್ರ ರಂಜಾನ್ ತಿಂಗಳಲ್ಲಿ, ಪ್ರವಾದಿ ಮುಹಮ್ಮದ್ ಅಲ್ಲಾನಿಂದ ಖುರಾನ್‌ನ ಮೊದಲ ಪದ್ಯಗಳನ್ನು ಪಡೆದರು ಎಂದು ಹೇಳಲಾಗುತ್ತದೆ. ಈ ಪವಿತ್ರ ದಿನಗಳಲ್ಲಿ ಉಪವಾಸವನ್ನು ಆಚರಿಸಲಾಗುತ್ತಿದೆ.

ಸೌಹಾರ್ದ ಇಫ್ತಾರ್‌ ಕೂಟ

ಮುಸ್ಲಿಂ ಧರ್ಮೀಯರ ನಂಬಿಕೆಯ ಪ್ರಕಾರ, ಪವಿತ್ರ ರಂಜಾನ್ ತಿಂಗಳಲ್ಲಿ, ಪ್ರವಾದಿ ಮುಹಮ್ಮದ್ ಅಲ್ಲಾನಿಂದ ಖುರಾನ್‌ನ ಮೊದಲ ಪದ್ಯಗಳನ್ನು ಪಡೆದರು ಎಂದು ಹೇಳಲಾಗುತ್ತದೆ. ಈ ಪವಿತ್ರ ದಿನಗಳಲ್ಲಿ ಉಪವಾಸವನ್ನು ಆಚರಿಸಲಾಗುತ್ತಿದ್ದು, ಇಡೀ ದಿನ ಹಸಿವು ಮತ್ತು ಬಾಯಾರಿಕೆಯಿಂದ ದೇವರನ್ನು ಪೂಜಿಸಲಾಗುತ್ತದೆ. ಸಂಜೆ, ಒಟ್ಟಿಗೆ ಕುಳಿತು ಉಪವಾಸವನ್ನು ಇಫ್ತಾರ್ ಏರ್ಪಡಿಸುವ ಮೂಲಕ ಮುಕ್ತಾಯಗೊಳಿಸಲಾಗುತ್ತದೆ. ಇಫ್ತಾರ್‌ನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವ ರೂಢಿ ಇಂದಿಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.