ADVERTISEMENT

'ಜನತಾ ದರ್ಶನ'ದಲ್ಲಿ ಸಮಸ್ಯೆಗಳ ಮಹಾಪೂರ!

ಗದಗ–ಬೆಟಗೇರಿ ನಗರಸಭೆ ಅಧ್ಯಕ್ಷರಿಂದ ವಿನೂತನ ಪ್ರಯೋಗ; ಸಾರ್ವಜನಿಕರ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 14:32 IST
Last Updated 22 ಸೆಪ್ಟೆಂಬರ್ 2018, 14:32 IST
ಗದಗ–ಬೆಟಗೇರಿ ನಗರಸಭೆಯಲ್ಲಿ ಶನಿವಾರ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರೊಬ್ಬರು, ಅಧ್ಯಕ್ಷ ಸುರೇಶ ಕಟ್ಟಿಮನಿ ಅವರಿಗೆ ಅಹವಾಲು ಸಲ್ಲಿಸಿದರು. ಪೌರಾಯುಕ್ತ ಮನ್ಸೂರ ಅಲಿ ಇದ್ದಾರೆ
ಗದಗ–ಬೆಟಗೇರಿ ನಗರಸಭೆಯಲ್ಲಿ ಶನಿವಾರ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರೊಬ್ಬರು, ಅಧ್ಯಕ್ಷ ಸುರೇಶ ಕಟ್ಟಿಮನಿ ಅವರಿಗೆ ಅಹವಾಲು ಸಲ್ಲಿಸಿದರು. ಪೌರಾಯುಕ್ತ ಮನ್ಸೂರ ಅಲಿ ಇದ್ದಾರೆ   

ಗದಗ: ‘ಆರು ತಿಂಗಳಿಂದ ನಮ್ಮ ವಾರ್ಡ್‌ನಲ್ಲಿ ಚರಂಡಿ ಸ್ವಚ್ಛ ಮಾಡಿಲ್ಲ, ಕಸ ವಿಲೇವಾರಿ ಸಮರ್ಪಕವಾಗಿಲ್ಲ, ಹಂದಿಗಳ ಕಾಟದಿಂದ ಹೊರಗೆ ಬರಲು ಆಗುತ್ತಿಲ್ಲ, ರಸ್ತೆಯ ತುಂಬಾ ಗುಂಡಿಗಳು ಬಿದ್ದಿವೆ, ಮಳೆಯಾದರೆ ಮನೆಯೊಳಗೆ ನೀರು ನುಗ್ಗುತ್ತದೆ, ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ, ಬೀದಿ ದೀಪಗಳು ಕೆಟ್ಟಿದ್ದು ಕತ್ತಲಲ್ಲೇ ಓಡಾಡಬೇಕಿದೆ’

ಶನಿವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸುರೇಶ ಕಟ್ಟಿಮನಿ ಅವರು ನಡೆಸಿದ ಜನತಾ ದರ್ಶನದಲ್ಲಿ ಸಮಸ್ಯೆಗಳ ಮಹಾಪೂರವೇ ಹರಿಯಿತು.

ಕೆಲವರು ನಗರಸಭೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಪೂರ್ಣ ಕಾಮಗಾರಿಗಳ ಕುರಿತು ದೂರಿದರು. ಸೋಮೇಶ್ವರ ದೇವಸ್ಥಾನ ಮುಂದಿನ ಅಪೂರ್ಣಗೊಂಡ ರಸ್ತೆ ಕುರಿತು 19 ನೇ ವಾರ್ಡ್‍ನ ನಿವಾಸಿ ಮುತ್ತಣ್ಣ ಭರಡಿ ಪ್ರಸ್ತಾಪಿಸಿದರು.ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಪೌರಾಯುಕ್ತ ಮನ್ಸೂರ ಅಲಿ ಅವರು ಅಧಿಕಾರಿಗಳಿ ನಿರ್ದೇಶನ ನೀಡಿದರು.

ADVERTISEMENT

29ನೇ ವಾರ್ಡ್‍ನ ಈಶ್ವರ ಬಡಾವಣೆಯ ಸಮಸ್ಯೆಗಳ ಬಗ್ಗೆ ಅಲ್ಲಿನ ನಿವಾಸಿಗಳು ದೂರಿದರು. ಗಂಜಿಬಸವೇಶ್ವರ ಸರ್ಕಲ್ ಬಳಿ ನಿತ್ಯ ವಾಹನದಟ್ಟಣೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ, ಎಸ್.ಎಂ. ಕೃಷ್ಣ ನಗರಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ಗಳು ಸೋರಿಕೆಯಾಗುತ್ತಿವೆ ಎಂದು ಸಾರ್ವಜನಿಕರು ದೂರಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ನಗರಸಭೆ ಸದಸ್ಯರು ತರಾಟೆಗೆ ತೆಗೆದುಕೊಂಡರು. ಪೀರಸಾಬ್ ಕೌತಾಳ, ಅನಿಲ ಸಿಂಗಟಾಲಕೇರಿ, ಅನಿಲ ಗರಗ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಲ್.ಜಿ. ಪತ್ತಾರ, ಬಂಡಿವಡ್ಡರ ಇದ್ದರು.

1 ಗಂಟೆ ನಡೆದ ಜನತಾ ದರ್ಶನದಲ್ಲಿ, ಸುರೇಶ ಕಟ್ಟಿಮನಿ 16 ಅಹವಾಲುಗಳನ್ನು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.