ADVERTISEMENT

ಕಪ್ಪತ್ತಗುಡ್ಡ ಕೆರೆಗಳಲ್ಲಿ ನೀರು: ಪ್ರಾಣಿ ಪಕ್ಷಿಗಳ ನೀರಿನ ಬವಣೆ ನೀಗಿಸಿದ ಮಳೆ

ಲಕ್ಷ್ಮಣ ಎಚ್.ದೊಡ್ಡಮನಿ
Published 26 ಮೇ 2021, 3:18 IST
Last Updated 26 ಮೇ 2021, 3:18 IST
ಕಪ್ಪತ್ತಗುಡ್ಡದಲ್ಲಿರುವ ಬೊದಬೆಂಚನ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು
ಕಪ್ಪತ್ತಗುಡ್ಡದಲ್ಲಿರುವ ಬೊದಬೆಂಚನ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು   

ಡಂಬಳ: ಮಧ್ಯ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಖ್ಯಾತವಾಗಿರುವ ಕಪ್ಪತ್ತಗುಡ್ಡದಲ್ಲಿನ ಪ್ರಾಣಿ, ಪಕ್ಷಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದವು. ಆದರೆ, ಕಳೆದ ಒಂದು ವಾರದಿಂದ ಸುರಿದ ಮಳೆಗೆ ಇಲ್ಲಿನ ಬೂದಬೆಂಚನಕೆರೆ ಹಾಗೂ ಆಲದ ಕೆರೆ ಸೇರಿದಂತೆ, ಇತರೆ ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳ ಕುಡಿಯುವ ನೀರಿನ ಕೊರತೆ ನೀಗಿದೆ.

ಮುಂಡರಗಿ ತಾಲ್ಲೂಕಿನಲ್ಲಿ ಕಪ್ಪತ್ತಗುಡ್ಡ 17 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ. 16 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮ ಎಂದು ಸರ್ಕಾರ ಘೋಷಣೆ ಮಾಡಿದೆ. ಹಾಗಾಗಿ, ಇಲ್ಲಿ ಕಲ್ಲು, ಮರಳು ಹಾಗೂ ಗಣಿಗಾರಿಕೆ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.

ಕಪ್ಪತ್ತಗುಡ್ಡದಲ್ಲಿ ಚಿರತೆ, ನವಿಲು, ಕೃಷ್ಣಮೃಗ, ಹೆಬ್ಬಾವು, ಕತ್ತೆಕಿರುಬು, ಕಾಡುಹಂದಿ, ಜಿಂಕೆ, ನರಿ, ಉಡ, ಮೊಲ, ಮುಳ್ಳುಹಂದಿ ಸೇರಿದಂತೆ ಹತ್ತಾರು ಬಗೆಯ ಸರಿಸೃಪಗಳು ವಾಸಿಸುತ್ತಿವೆ. ಅಕಾಲಿಕ ಮಳೆಯಿಂದಾಗಿ ಅರಣ್ಯ ಪ್ರದೇಶದ ಕೆರೆಗಳು ಹಾಗೂ ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ಪ್ರಾಣಿಗಳಿಗೆ ಅನುಕೂಲವಾಗಿದೆ.

ADVERTISEMENT

‘ಬೇಸಿಗೆ ಸಮಯದಲ್ಲಿ ಅರಣ್ಯ ಪ್ರದೇಶದ ಪ್ರಾಣಿ ಪಕ್ಷಿಗಳ ನೀರಿನ ಬವಣೆ ನೀಗಿಸಲು ಟ್ಯಾಂಕರ್‌ ಆಶ್ರಯಿಸಿದ್ದೆವು. ನಾಲ್ಕೈದು ತಿಂಗಳ ಕಾಲ ಅರಣ್ಯದಲ್ಲಿರುವ ನೀರಿನ ತೊಟ್ಟಿಗಳನ್ನು ಟ್ಯಾಂಕರ್‌ ಮೂಲಕ ತುಂಬಿಸುತ್ತಿದ್ದೆವು. ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಕಪ್ಪತ್ತಗುಡದಲ್ಲಿನ 30ಕ್ಕೂ ಹೆಚ್ಚು ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.