ADVERTISEMENT

ಸಂತ್ರಸ್ತರಿಗೆ ನೆರವಾಗಲು ಮಡಿಕೇರಿಗೆ ಡಿಜಿಎಂ ವೈದ್ಯರ ತಂಡ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 12:23 IST
Last Updated 23 ಆಗಸ್ಟ್ 2018, 12:23 IST
ಕೊಡಗು ಪ್ರವಾಹ ಸಂತ್ರಸ್ತರಿಗೆ ರವಾನಿಸಲು ಸಂಗ್ರಹಿಸಿರುವ ವಸ್ತುಗಳ ಜತೆಗೆ ಗದುಗಿನ ಡಿಜಿಎಂ ಆರ್ಯುವೇದ ಕಾಲೇಜಿನ ವೈದ್ಯರ ತಂಡ
ಕೊಡಗು ಪ್ರವಾಹ ಸಂತ್ರಸ್ತರಿಗೆ ರವಾನಿಸಲು ಸಂಗ್ರಹಿಸಿರುವ ವಸ್ತುಗಳ ಜತೆಗೆ ಗದುಗಿನ ಡಿಜಿಎಂ ಆರ್ಯುವೇದ ಕಾಲೇಜಿನ ವೈದ್ಯರ ತಂಡ   

ಗದಗ: ಕೊಡಗು ಪ್ರವಾಹ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ನಗರದ ಡಿಜಿಎಂ ಆರ್ಯುವೇದ ಕಾಲೇಜಿನ 6 ಮಂದಿ ವೈದ್ಯರ ತಂಡ ಗುರುವಾರ ಮಡಿಕೇರಿಗೆ ಪ್ರಯಾಣ ಬೆಳೆಸಿತು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸಿ ಪಾಟೀಲ ಅವರು,‘ಕಾಲೇಜಿನ ಸಿಬ್ಬಂದಿ ತಮ್ಮ ಮೂಲವೇತನದ ಜತೆಗೆ ಶೇ 10ರಷ್ಟನ್ನು ಸೇರಿಸಿ ಒಟ್ಟು ₹1 ಲಕ್ಷ ನಗದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಜಮಾ ಮಾಡಲು ನಿರ್ಧರಿಸಿದ್ದೇವೆ.ಕಾಲೇಜಿನ ವಿದ್ಯಾರ್ಥಿಗಳಿಂದ ದೇಣಿಗೆ ಮೂಲಕ ಸಂಗ್ರಹವಾದ ₹26ಸಾವಿರ ಮೊತ್ತದಲ್ಲಿ ಔಷಧ ಖರೀದಿಸಲಾಗಿದೆ. ಇದರ ಜತೆಗೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ದೇಣಿಗೆಯಾಗಿ ನೀಡಿದ ಅವಶ್ಯಕ ವಸ್ತುಗಳನ್ನು ಅಲ್ಲಿಗೆ ತಲುಪಿಸಲಾಗುವುದು. ಇದಕ್ಕೆ ಡೋಣಿ ಗ್ರಾಮದ ಯುವಕರು ವಾಹನದ ವ್ಯವಸ್ಥೆ ಮಾಡಿದ್ದಾರೆ.ಮಡಿಕೇರಿಗೆ ಹೋಗುವ ವೈದ್ಯರು 3 ದಿನ ಅಲ್ಲಿದ್ದು, ವೈದ್ಯಕೀಯ ಸೇವೆ ನೀಡಲಿದ್ದಾರೆ’ಎಂದರು.

ಗ್ರಾಮದತ್ತು ಯೋಜನೆ: ಪ್ರವಾಹ ಪೀಡಿತ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ, ಹೆಚ್ಚಿನ ವೈದ್ಯಕೀಯ ಸೇವೆ ಅಗತ್ಯವಿರುವ ಗ್ರಾಮವೊಂದನ್ನು ಗುರುತಿಸಲಾಗುವುದು.ನಂತರ ಆ ಗ್ರಾಮವನ್ನು ಕಾಲೇಜಿನ ವತಿಯಿಂದ ದತ್ತು ಪಡೆದು ಅಲ್ಲಿಗೆ ನಿಯಮಿತವಾಗಿ ವೈದ್ಯಕೀಯ ಸೇವೆ ಒದಗಿಸಲಾಗುವುದು.ಶಸ್ತ್ರಚಿಕಿತ್ಸೆ ಅಗತ್ಯ ಇದ್ದವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ವೈದ್ಯರ ತಂಡದಲ್ಲಿ ಡಾ.ಎಂ.ಡಿ ಸಾಮುದ್ರಿ, ಡಾ.ಬುದೆಶ್‌ ಕನಾಜ್‌, ಡಾ. ರಾಜೇಶ್‌, ಡಾ.ಪ್ರಶಾಂತ್‌, ಡಾ.ನವೀನ್‌, ಡಾ.ಶಂಕರ್‌ ಇರಲಿದ್ದು, ಪ್ರವಾಹದ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾವು, ವಿಷ ಜಂತುಗಳ ಕಡಿತ, ವಾಂತಿಭೇದಿ, ಜ್ವರ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.