ADVERTISEMENT

ಅನರ್ಹರಿಗೆ ಕಾರ್ಮಿಕ ಕಾರ್ಡ್‌ ಸಿಗದಂತೆ ನಿಗಾವಹಿಸಿ

ಕಾರ್ಮಿಕರ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 16:24 IST
Last Updated 1 ಮೇ 2025, 16:24 IST
ಗದಗ ನಗರದ ಡಿಸಿ ಮಿಲ್‌ ಕಾಂಪೌಂಡ್‍ನಲ್ಲಿರುವ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಮಿಕರ ದಿನಾಚರಣೆಯನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು
ಗದಗ ನಗರದ ಡಿಸಿ ಮಿಲ್‌ ಕಾಂಪೌಂಡ್‍ನಲ್ಲಿರುವ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಮಿಕರ ದಿನಾಚರಣೆಯನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು   

ಗದಗ: ‘ಕಾರ್ಮಿಕ ಕಾರ್ಡ್‌ ಇದ್ದರೆ ಸರ್ಕಾರಿ ನೌಕರಿ ಇದ್ದಂತೆ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಒದಗಿಸಲು ಸರ್ಕಾರ ಕಾರ್ಮಿಕ ಕಾರ್ಡ್‌ ಮೂಲಕ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ’ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದ ಡಿಸಿ ಮಿಲ್‌ ಕಾಂಪೌಂಡ್‍ನಲ್ಲಿರುವ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಕೊಟ್ಟಿ ಕಾರ್ಡ್‌ ಸೃಷ್ಟಿ ಮಾಡಿ ಅಹರ್ರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಂತೆ ಮಾಡಲು ಕುತಂತ್ರಗಳು ನಡೆದಿವೆ. ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಕಾರ್ಮಿಕ ಕಾರ್ಡ್‌ ಸಿಗುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ 1.15 ಲಕ್ಷ ಕಾರ್ಮಿಕ ಕಾರ್ಡ್‍ಗಳಿದ್ದು ಅದರಲ್ಲಿ 20ರಿಂದ 25 ಸಾವಿರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಕೊಟ್ಟಿ ಕಾರ್ಡ್‍ಗಳನ್ನು ನೀವೇ ಬಂದ್ ಮಾಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಏರ್‌ಪೋರ್ಟ್‌, ಫ್ಲೈಓವರ್ ನಿರ್ಮಾಣವಾದರೆ ಮಾತ್ರ ಅಭಿವೃದ್ಧಿ ಅಲ್ಲ. ಬಡವರ ಮನೆಯೊಳಗೆ ನಗು ತಂದರೆ ಅದನ್ನು ಅಭಿವೃದ್ಧಿ ಎಂದು ಪರಿಗಣಿಸುವವರು ನಾವು. ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಹುನ್ನಾರ ನಡೆದಿದೆ. ಅವನ್ನೆಲ್ಲ ಹತ್ತಿಕ್ಕಿ ಪಂಚ ಗ್ಯಾರಂಟಿ ಮೂಲಕ ಬಡವರ ಬದುಕು ಹಸನು ಮಾಡಲಾಗುತ್ತಿದೆ’ ಎಂದರು.

ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು. ಹರ್ಲಾಪೂರದ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮಾಬುಖಾನ ಪಠಾಣ ಅಧ್ಯಕ್ಷತೆ ವಹಿಸಿದ್ದರು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ನಗರಸಭೆ ಸದಸ್ಯ ಕೃಷ್ಣ ಪರಾಪುರ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಪಾಲ್ಗೊಂಡಿದ್ದರು.

ಮಹಾಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಕರಿಸೋಮನಗೌಡ್ರ, ಉಪಾಧ್ಯಕ್ಷರಾದ ಜಂದಿಸಾಬ ಢಾಲಾಯತ, ವಿವಿಧ ಘಟಕಗಳ ಅಧ್ಯಕ್ಷರಾದ ಚನ್ನವೀರಗೌಡ ಕೆ. ಪಾಟೀಲ, ಚಾಂದಸಾಬ ಅಬ್ಬಿಗೇರಿ, ಕಲ್ಲೇಶಪ್ಪ ಬಿ. ಕುಡಗುಂಟಿ, ಮೈನುದ್ದೀನ್‌, ಅಲ್ತಾಫ್ ಕೊಪ್ಪಳ, ಅಡಿವೆಪ್ಪ ಎಸ್. ಚಲವಾದಿ, ಚಾಂದಸಾಬ ಸೊಲಾಪೂರ, ನೂರ್‌ಅಹ್ಮದ ಬಳ್ಳಾರಿ, ಮಹಮದ್‌ ಇಬ್ರಾಹಿಂ ಹಳ್ಳಿಕೇರಿ, ಕೆ.ಐ.ಕರಡಿ ಹಾಗೂ ಪದಾಧಿಕಾರಿಗಳು ಇದ್ದರು.

ಅಪೂರ್ಣಗೊಂಡಿರುವ ಕಾರ್ಮಿಕರ ಸಂಘದ ಕಟ್ಟಡವನ್ನು ಪೂರ್ಣಗೊಳಿಸಲು ಶಾಸಕರ ನಿಧಿಯಿಂದ ₹10 ಲಕ್ಷ ಅನುದಾನ ನೀಡಲಾಗುವುದು.
–ಎಚ್‌.ಕೆ.ಪಾಟೀಲ, ಸಚಿವ

ವ್ಯವಸ್ಥೆ ಬದಲಾಗಬೇಕಿದೆ: ಸಚಿವ

‘ನಮ್ಮ ದೇಶದಲ್ಲಿ ಬಹಳಷ್ಟು ಜನರು ಬೆವರು ಸುರಿಸದೆಯೇ ಆರಾಮವಾಗಿದ್ದಾರೆ. ಬೆವರು ಸುರಿಸುತ್ತಿರುವವರು ಎಲ್ಲಿ ಇದ್ದಾರೋ ಈಗಲೂ ಅಲ್ಲೇ ಇದ್ದಾರೆ’ ಎಂದು ಸಚಿವ ಎಚ್.ಕೆ‍.‍ಪಾಟೀಲ ಬೇಸರ ವ್ಯಕ್ತಪಡಿಸಿದರು. ‘ಯಾರು ರಕ್ತ ಸುಟ್ಟುಕೊಂಡು ಕೆಲಸ ಮಾಡುತ್ತಾರೆ ಯಾರು ಬೆವರು ಸುರಿಸಿ ಸೇವೆ ಮಾಡುತ್ತಾರೆ ಯಾರು ಜೀವದ ಹಂಗಿಲ್ಲದೇ ಕೆಲಸ ಮಾಡುತ್ತಾರೆ ಅವರು ಯಾರೂ ಉನ್ನತ ಜೀವನಮಟ್ಟವನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ನಿಮ್ಮನ್ನು ದುಡಿಸುವ ವರ್ಗ ಐಷಾರಾಮಿ ಜೀವನ ಸಾಗಿಸುವಂತಹ ಆರ್ಥಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅದು ಬದಲಾಗಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.