ಗದಗ: ಬಸವಣ್ಣನವರು ಜಾತಿ, ಮತ, ಪಂಥ, ವರ್ಗ, ವರ್ಣ ಭೇದಗಳನ್ನು ತೊಡೆದು ಮನುಷ್ಯ ಮನುಷ್ಯರಲ್ಲಿ ನಿಜವಾದ ಪ್ರೀತಿ, ಸಾಮರಸ್ಯ ಭಾವ ಬೆಳೆಸಿದರು ಎಂದು ಅಂತೂರ ಬೆಂತೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಜಿ. ದೊಡ್ಡಣ್ಣನವರ ಹೇಳಿದರು.
ನಗರದ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪ್ರಗತಿಶೀಲ ಸಂಘದ 2,642ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಸವಣ್ಣನವರ ಮಾತುಗಳು ವಚನಗಳಾದವು. ಅವರು ನುಡಿದಂತೆ ನಡೆದರು. ಬಸವಣ್ಣನವರು ಮನುಷ್ಯನ ಜೀವನಕ್ಕೆ ನೈತಿಕ ಮೌಲ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.
‘ಬಸವಣ್ಣನವರ ಕಾಲದಲ್ಲಿ ಎಷ್ಟೋ ಜನ ಶರಣರು ಬದುಕಿನ ಅನುಭವಗಳನ್ನು ಕಟ್ಟಿಕೊಂಡು ಅನುಭಾವಿಗಳಾದರು. ಈ ಶರಣರಲ್ಲಿ ಕುರುಬ ಗೊಲ್ಲಾಳೇಶ್ವರರೂ ಒಬ್ಬರು. ಇಂದಿನ ಜನತೆಗೆ, ಯುವಕರಿಗೆ, ಮಕ್ಕಳಿಗೆ ಇಂತಹ ಶರಣರ ತತ್ತ್ವಾದರ್ಶಗಳ ಅಗತ್ಯ ಬಹಳಷ್ಟು ಇದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಶ್ರೀ ಮಾತನಾಡಿ, ‘ಶಿವಾನುಭವ ಅಂದರೆ ಒಳ್ಳೆಯದನ್ನು ಕುರಿತು ಚಿಂತನೆ ಮಾಡುವುದು ಮತ್ತು ಅನುಭವಕ್ಕೆ ತಂದುಕೊಳ್ಳುವುದು. ಶರಣರು, ಮಹಾತ್ಮರ, ಸಂತರ ಸಂದೇಶಗಳನ್ನು ಮತ್ತು ಅವರ ಪವಿತ್ರ ಚರಿತ್ರೆಯನ್ನು ಕೇಳುವುದು, ಅವರ ಮಾನವೀಯ ಮೌಲ್ಯಗಳನ್ನು ತಿಳಿದುಕೊಂಡು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇವೆಲ್ಲವೂ ಶಿವಾನುಭವ ಎನಿಸಿಕೊಳ್ಳುತ್ತದೆ. ದೇವರಲ್ಲಿ ನಂಬಿಕೆ, ಶ್ರದ್ಧೆ, ವಿಶ್ವಾಸವನ್ನಿಟ್ಟುಕೊಂಡಾಗ ಮಾತ್ರ ಮನುಷ್ಯನ ಬದುಕು ಅರ್ಥಪೂರ್ಣವಾಗುತ್ತದೆ ಮತ್ತು ಮನುಷ್ಯ ಜನ್ಮಕ್ಕೆ ಬೆಲೆ ಬರುತ್ತದೆ. ಕುರುಬ ಗೊಲ್ಲಾಳೇಶ್ವರರಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೆಂದರೆ ಅವರು ಶಿವನಲ್ಲಿ ಇಟ್ಟಿರುವ ಅಚಲ ನಂಬಿಕೆ. ಗೊಲ್ಲಾಳೇಶ್ವರರು ಮೊದಲಿಗೆ ಶ್ರೇಷ್ಠ ಶಿವಭಕ್ತರಾಗಿದ್ದರು. ನಂತರ ಕಲ್ಯಾಣಕ್ಕೆ ಬಂದು ಶರಣರ ಸಂಘದಲ್ಲಿ ಸೇರಿಕೊಂಡು ಮಹಾನ ಶಿವಶರಣರಾಗಿ ಹೊರಹೊಮ್ಮಿದರು’ ಎಂದು ಶ್ರೀಗಳು ತಿಳಿಸಿದರು.
ಮುಖ್ಯ ಅತಿಥಿ ಫಕೀರಪ್ಪ ಹೆಬಸೂರ ಮಾತನಾಡಿ, ತೋಂಟದಾರ್ಯ ಮಠದಲ್ಲಿ ಪ್ರತಿ ಸೋಮವಾರ ಶರಣರ ಚಿಂತನೆಗಳನ್ನು ಏರ್ಪಡಿಸುತ್ತ ಬಂದಿರುವುದು ಅಭಿನಂದನೀಯ ಕಾರ್ಯ ಎಂದು ತಿಳಿಸಿದರು.
ಪ್ರಕಾಶಕ ಜಯದೇವ ಮೆಣಸಗಿ ಮಾತನಾಡಿ, ‘ತೋಂಟದಾರ್ಯ ಮಠ ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ಲಿಂಗೈಕ್ಯ ತೋಂಟದ ಶ್ರೀಗಳು ಪ್ರತಿ ಸೋಮವಾರ ತಪ್ಪದೇ ಶಿವಾನುಭವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು. ಡಾ. ತೋಂಟದ ಸಿದ್ಧರಾಮ ಶ್ರೀಗಳು ಶಿವಾನುಭವ ಕಾರ್ಯಕ್ರಮಗಳನ್ನು ತಪ್ಪದೇ ಮುನ್ನಡೆಸಿಕೊಂಡು ಹೋಗುತ್ತಿರುವುದು ಅತ್ಯಂತ ಸಂತಸ ತಂದಿದೆ’ ಎಂದು ತಿಳಿಸಿದರು.
ಕಲಾವಿದರಾದ ಕುಮಾರಸ್ವಾಮಿ ಹಿರೇಮಠ, ಹೇಮಂತ ಹಿರೇಮಠ ಅವರ ವಚನ ಸಂಗೀತದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾವ್ಯಾ ವಿರೂಪಾಕ್ಷಯ್ಯ ಇಚ್ಚಂಗಿಮಠ ಧರ್ಮಗ್ರಂಥ ಪಠಣ ಮಾಡಿದರು. ಸೌಮ್ಯ ಶರಣಪ್ಪ ತುಂಬರಗುದ್ದಿ ವಚನ ಚಿಂತನ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.