ADVERTISEMENT

ಕರ್ನಾಟಕ್‌ ಬಂದ್‌ಗೆ ನೀರಸ ಪ್ರತಿಕ್ರಿಯೆ

ರಸ್ತೆ ತಡೆಗೆ ಮುಂದಾದ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 6:20 IST
Last Updated 6 ಡಿಸೆಂಬರ್ 2020, 6:20 IST
ರಸ್ತೆ ತಡೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು
ರಸ್ತೆ ತಡೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು   

ಗದಗ: ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಗದುಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಶನಿವಾರ ಮುಳಗುಂದ ನಾಕಾ ವೃತ್ತದಲ್ಲಿ ಜಮಾಯಿಸಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮಾನವ ಸರಪ‍ಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೈಗೆ ಕಪ್ಪು ಪಟ್ಟಿ ಧರಿಸಿ ಆಗ್ರಹಿಸಿದರು. ಕನ್ನಡ ವಿರೋಧಿ ನಿಲುವು ಖಂಡಿಸಿ, ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.

ರಾಜ್ಯ ಸರ್ಕಾರದ ಕನ್ನಡ ವಿರೋಧಿ ನಿಲುವು ಹಾಗೂ ಕನ್ನಡ ಸಂಘಟನೆಗಳ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕರವಿರುದ್ಧ ಘೋಷಣೆ ಕೂಗಿದರು.

ADVERTISEMENT

ಕರವೇ ಕಾರ್ಯಕರ್ತರು ಕಿತ್ತೂರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳು, ಲಾರಿ ಮತ್ತು ಇತರೆವಾಹನಗಳನ್ನು ತಡೆಯಲು ಯತ್ನಿಸಿದರು. ಅಂಗಡಿಗಳನ್ನು ಒತ್ತಾಯ ಪೂರ್ವಕವಾಗಿ ಬಂದ್‌ ಮಾಡಿಸಲು ಪ್ರಯತ್ನಿಸಿದರು. ಆಗ ಪೊಲೀಸರು ಮಧ್ಯೆ ಪ್ರವೇಶಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ಕೆರಳಿದ ಕಾರ್ಯಕರ್ತರು ಪೊಲೀಸರ ವಿರುದ್ಧವೂ ಘೋಷಣೆ ಕೂಗಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಟಿಪ್ಪು ವೃತ್ತದಲ್ಲಿ ಕರವೇ ಕಾರ್ಯಕರ್ತರು ಬಸವರಾಜ ಪಾಟೀಲ ಯತ್ನಾಳ್ ಪ್ರತಿಕೃತಿ ದಹಿಸಲು ಪ್ರಯತ್ನಿಸಿದರು. ಆಗ ಕರವೇ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ವಿರೋಧದ ನಡುವೆಯೂ ಪ್ರತಿಭಟನಾಕಾರರು ಪ್ರತಿಕೃತಿ ದಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸದಸ್ಯರು ರಸ್ತೆ ತಡೆಗೆ ಮುಂದಾದರು. ಹುಬ್ಬಳ್ಳಿ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ತಡೆದು ಸರ್ಕಾರಿ ಬಸ್‌ಗಳನ್ನು ಅಡ್ಡಗಟ್ಟಿದ 20ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಪೊಲೀಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜನಜೀವನ ಸಹಜ: ಶನಿವಾರ ನಡೆದ ಬಂದ್‌ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಂದ್‌ನಲ್ಲಿ ಪಾಲ್ಗೊಳ್ಳಲು ಜನ ಕೂಡ ಉತ್ಸಾಹ ತೋರಲಿಲ್ಲ. ಆರೋಗ್ಯ ಸೇವೆ, ಸಾರಿಗೆ, ತರಕಾರಿ ಮಾರುಕಟ್ಟೆ ಹಾಗೂ ಹೋಟೆಲ್‌ಗಳು ಎಂದಿನಂತೆ ಕಾರ್ಯಾಚರಿಸಿದ್ದರಿಂದ ಜನಜೀವನ ಸಹಜವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.