ADVERTISEMENT

ಜಾನುವಾರುಗಳಿಗೆ ಚರ್ಮ ಗಂಟು ರೋಗ, ಉಪಚರಿಸಿದರೆ ರೋಗ ಗುಣ: ಡಾ.ಗುರುರಾಜ

ಜಾನುವಾರುಗಳಿಗೆ ಚರ್ಮ ಗಂಟು ರೋಗ– ಎಲ್ಲೆಡೆ ಚಿಕಿತ್ಸೆ ಲಭ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:36 IST
Last Updated 29 ಸೆಪ್ಟೆಂಬರ್ 2020, 16:36 IST
 ಡಾ.ಗುರುರಾಜ ಮನಗೂಳಿ
 ಡಾ.ಗುರುರಾಜ ಮನಗೂಳಿ   

ಗದಗ: ‘ಚರ್ಮ ಗಂಟು ರೋಗವು (ಲಂಪಿ ಸ್ಕಿನ್ ಡಿಸೀಸ್) ರೋಣ ತಾಲ್ಲೂಕಿನ ನರೇಗಲ್, ಗದಗ ತಾಲ್ಲೂಕಿನ ಶಿರುಂಜ, ಶಿರಹಟ್ಟಿ ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ಆ ಜಾನುವಾರುಗಳನ್ನು ಪ್ರತ್ಯೇಕವಾಗಿ ಇರಿಸಿ ಉಪಚರಿಸಲಾಗುತ್ತಿದೆ’ ಎಂದು ಗದಗ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಗುರುರಾಜ ಮನಗೂಳಿ ಹೇಳಿದ್ದಾರೆ.

‘ಈ ರೋಗವು ಇತ್ತಿಚೆಗಷ್ಟೇ ಕಾಣಿಸಿಕೊಂಡಿದ್ದು, ಪ್ರಾಣಿಗಳ ಮೇಲಿನ ಪರೋಪಜೀವಿಗಳು ಹಾಗೂ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಪ್ರಾಣಿಗಳಿಗೆ ಜ್ವರ ಕಾಣಿಸಿಕೊಂಡು ದನಗಳ ಚರ್ಮದೊಳಗೆ ಗುಂಡಾದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಉಪಚರಿಸದಿದ್ದರೆ ಈ ಗುಳ್ಳೆಗಳಿಗೆ ಗಾಯವಾಗಿ ಮೈತುರಿಕೆ ಪ್ರಾರಂಭವಾಗುತ್ತದೆ. ಇದರಿಂದ ಜಾನುವಾರುಗಳು ಕಡಿಮೆ ಆಹಾರ ಸೇವನೆ, ಹಾಲು ನೀಡುವ ಪ್ರಮಾಣ ಕಡಿಮೆ ಮಾಡುತ್ತವೆ’ ಎಂದು ಅವರು ತಿಳಿಸಿದ್ದಾರೆ.

‘ಇಲಾಖೆಯಿಂದ ಈಗಾಗಲೇ ಜಿಲ್ಲೆಯ ಎಲ್ಲ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ, ಜಾನುವಾರು ಮಾಲೀಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ.ಚರ್ಮ ಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಲಾಗಿದೆ. ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ರೋಗದಿಂದ ಬಳಲುವ ಜಾನುವಾರುಗಳು ಸಾಯುವ ಪ್ರಮಾಣ ತುಂಬ ಕಡಿಮೆ ಇದೆ. ಉಪಚರಿಸಿದರೆ ರೋಗ ಗುಣವಾಗುವುದು. ಆದಾಗ್ಯೂ ಸಾವು ಸಂಭವಿಸಿದರೆ ಕ್ರಿಮಿನಾಶಕ ಸಿಂಪಡಿಸಿ ಆಳವಾದ ಗುಂಡಿಯಲ್ಲಿ ಹೂಳಬೇಕು. ಜಿಲ್ಲೆಯ ಎಲ್ಲ ಸಂಸ್ಥೆಗಳಲ್ಲಿ ಔಷಧಿ ಲಭ್ಯವಿದ್ದು, ರೋಗಲಕ್ಷಣ ಕಂಡ ತಕ್ಷಣ ರೈತರು ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಪಡೆಯಬೇಕು’ ಎಂದು ಡಾ. ಗುರುರಾಜ ಸಲಹೆ ನೀಡಿದ್ದಾರೆ.

‘ಜಿಲ್ಲೆಯಲ್ಲಿ ಕುರಿ, ಮೇಕೆಗಳಿಗೆ ನೀಲಿ ನಾಲಿಗೆ (ಬ್ಲೂ ಟಂಗ್‌) ರೋಗವು ಅಲ್ಲಲ್ಲಿ ಕಾಣಿಸಿಕೊಂಡಿದೆ. ಕುರಿಗಳಿಗೆ ತೀವ್ರ ಜ್ವರ ಬರುವುದು, ಜೊಲ್ಲು ಸುರಿಯುವುದು, ತುಟಿ– ವಸಡುಗಳಲ್ಲಿ ಬಾವು ಬರುವುದು, ಆಹಾರ ಸೇವಿಸದಿರುವುದು ಈ ರೋಗದ ಲಕ್ಷಣವಾಗಿದೆ. ನೀಲಿ ನಾಲಿಗೆ ರೋಗದಿಂದ ಬಳಲುತ್ತಿರುವ ಕುರಿ, ಮೇಕೆಗಳಿಗೆ ಈಗಾಗಲೇ ಉಪಚಾರ ನೀಡಲಾಗಿದೆ. ರೋಗ ಕಂಡುಬಂದ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿಯ ಕುರಿ, ಮೇಕೆಗಳಿಗೆ ಲಸಿಕೆ ಹಾಕಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ರೋಗ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳು

* ಜಾನುವಾರುಗಳ ಕೊಟ್ಟಿಗೆ ಮತ್ತು ಅದರ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು

* ಕೊಟ್ಟಿಗೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು

* ಸೊಳ್ಳೆ, ನೊಣ ಮತ್ತು ಉಣ್ಣೆ, ಚಿಕ್ಕಾಡಗಳನ್ನು ನಿಯಂತ್ರಿಸುವುದು

* ಕ್ರಿಮಿನಾಶಕಗಳನ್ನು ಬಳಸುವುದು, ಕೊಟ್ಟಿಗೆಯಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕುವುದು

* ರೋಗ ಪೀಡಿತ ಪ್ರಾಣಿಗಳ ಸಾಗಣೆ ನಿಯಂತ್ರಣ

* ರೋಗ ಪತ್ತೆಗಾಗಿ ಪಶುವೈದ್ಯರು ಮಾದರಿಗಳನ್ನು ಬಾಗಲಕೋಟೆಯ ಜೈವಿಕ ಸಂಸ್ಥೆಗೆ ಕಳುಹಿಸಿ ದೃಢಪಡಿಸಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.