ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮಕ್ಕೆ ಮಲಪ್ರಭಾ ಪ್ರವಾಹದ ನೀರು ನುಗ್ಗಿತು
ನರಗುಂದ: ನಿರಂತರ ಮಳೆ ಸುರಿದ ಪರಿಣಾಮ ಬುಧವಾರ ಮಲಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದೆ. ಸವದತ್ತಿ ಬಳಿ ಇರುವ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಬಾಕಿ ಇದ್ದು, ತಾಲ್ಲೂಕಿನ ನದಿಪಾತ್ರದ ಗ್ರಾಮಗಳ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಬುಧವಾರ ಸಂಜೆ ಲಕಮಾಪುರ ಗ್ರಾಮದ ಮನೆಗಳ ಸಮೀಪ ಪ್ರವಾಹದ ನೀರು ಬರುತ್ತಿದ್ದು, ಅದರ ಮಾರ್ಗ ಬದಲಾಯಿಸಲಾಗಿದೆ. ಹೊರ ಹರಿವು 15 ಸಾವಿರ ಕ್ಯುಸೆಕ್ ಹೆಚ್ಚಳವಾದಲ್ಲಿ ಗ್ರಾಮದ ಕೆಲವು ಮನೆಗಳು ಪ್ರವಾಹಕ್ಕೆ ತುತ್ತಾಗುವುದು ನಿಶ್ಚಿತವಾಗಿದೆ. ಈಗಾಗಲೇ ಲಕಮಾಪುರ, ವಾಸನ, ಬೆಳ್ಳೇರಿ, ಕೊಣ್ಣೂರ, ಬೂದಿಹಾಳದ ಗ್ರಾಮಗಳ ನೂರಾರು ಎಕರೆ ಭೂಮಿಗೆ ನೀರು ನುಗ್ಗಿದೆ. ಇದರಿಂದ ಬೆಳೆ ಹಾನಿ ಸಂಭವಿಸಿದೆ. ಲಕಮಾಪುರ ಗ್ರಾಮದ ಆಚೆ ಇರುವ ದನಗಳ ಕೊಟ್ಟಿಗೆ ಸಮೀಪ ಪ್ರವಾಹ ಬಂದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಲಕಮಾಪುರ ಗ್ರಾಮಸ್ಥರು ತಿಳಿಸಿದ್ದಾರೆ.
ಕೊಣ್ಣೂರ ಬಳಿಯ ಹಳೆ ಮಲಪ್ರಭಾ ಸೇತುವೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಿರೋಳ ಬಳಿಯ ಮಲಪ್ರಭಾ ಸೇತುವೆ ತುಂಬಿ ಹರಿಯುತ್ತಿದ್ದು, ಶಿರೋಳ-ಕಿತ್ತಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. 2079.50 ಅಡಿಗಳಷ್ಟು ಸಾಮರ್ಥ್ಯ ಹೊಂದಿರುವ ನವಿಲುತೀರ್ಥ ಜಲಾಶಯ 2078.20 ಅಡಿಗಳಷ್ಟು ನೀರು ಸಂಗ್ರಹವಾಗಿದೆ. 16,752 ಕ್ಯುಸೆಕ್ ಒಳಹರಿವಿದ್ದು, 12,794 ಕ್ಯುಸೆಕ್ ಹೊರಹರಿವಿದೆ.
ಕಂದಾಯ ನಿರೀಕ್ಷಕ ಭೇಟಿ: ಕೊಣ್ಣೂರ ಹೋಬಳಿ ಕಂದಾಯ ನಿರೀಕ್ಷಕ ಐ.ವೈ. ಕಳಸಣ್ಣವರ, ಗ್ರಾಮ ಆಡಳಿತಾಧಿಕಾರಿ ನೀರಜ್ ದೊಡ್ಡಮನಿ ಹಾಗೂ ಪಿಡಿಒ ವಾಲಿ ಲಕಮಾಪುರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
‘ಮಲಪ್ರಭಾ ಪ್ರವಾಹ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ಹೆಚ್ಚಿನ ನೀರು ಹೊರ ಬಿಟ್ಟರೆ ಲಕಮಾಪುರ ಗ್ರಾಮ ಹಾಗೂ ಹಳೆ ಬೂದಿಹಾಳ ಪ್ರವೇಶಿಸಬಹುದು’ ಎಂದು ಕಂದಾಯ ನಿರೀಕ್ಷಕ ಐ.ವೈ. ಕಳಸಣ್ಣವರ ಹೇಳಿದರು.
‘ಸದ್ಯಕ್ಕೆ ಜನ ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.