ADVERTISEMENT

ಜನರ ಮೋಡಿ ಮಾಡಿದ ಮ್ಯಾರಥಾನ್‌

ಗೆಲುವಿಗಾಗಿ ನೂರಾರು ಮಂದಿ ಓಟ; ಮೇಳೈಸಿದ ಕ್ರೀಡಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 5:12 IST
Last Updated 28 ನವೆಂಬರ್ 2022, 5:12 IST
ರನ್‌ ಫಾರ್‌ ವಿನ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದವರ ಜತೆಗೆ ಹೆಜ್ಜೆ ಹಾಕಿದ ಅನಿಲ್‌ ಮೆಣಸಿನಕಾಯಿ
ರನ್‌ ಫಾರ್‌ ವಿನ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದವರ ಜತೆಗೆ ಹೆಜ್ಜೆ ಹಾಕಿದ ಅನಿಲ್‌ ಮೆಣಸಿನಕಾಯಿ   

ಗದಗ: ಗದಗ ಸ್ಪೋರ್ಟ್ಸ್‌ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ ಆಯೋಜಿಸಿದ್ದ ‘ರನ್‌ ಫಾರ್‌ ವಿನ್‌’ ಮ್ಯಾರಥಾನ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜೆಪಿ ಯುವ ಮುಖಂಡ ಅನಿಲ್‌ ಮೆಣಸಿನಕಾಯಿ ನೇತೃತ್ವದಲ್ಲಿ ಭಾನುವಾರ ನಡೆದ 27 ಕಿ.ಮೀ. ದೂರದ ಗೆಲುವಿನ ಓಟ ಅವಳಿ ನಗರದ ಜನತೆಯಲ್ಲಿ ಪುಳಕ ಮೂಡಿಸಿತು.

ನಗರದ ಕಳಸಾಪೂರ ರಸ್ತೆಯಲ್ಲಿರುವ ಪಾಂಡುರಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಡೆಲ್ಲಿ ಡೇರ್ ಡೆವಿಲ್ ತಂಡದ ಕ್ರಿಕೆಟ್ ಆಟಗಾರ ಎಚ್.ಎಸ್. ಶರತ್ ಹಾಗೂ ಕಿರುತೆರೆ ನಟ ದೀಪಕ್‌ಗೌಡ ಮ್ಯಾರಥಾನ್‌ಗೆ ಚಾಲನೆ ನೀಡಿದರು.

ನಿಗದಿತ ಮಾರ್ಗದಲ್ಲಿ ಗೆಲುವಿಗಾಗಿ ನೂರಾರು ಮಂದಿ ಓಡಿದರು. ಅವಳಿ ನಗರದ ಪ್ರತಿ ವಾರ್ಡ್‍ನಲ್ಲಿಯೂ ಬಾವುಟಗಳು ಹಾರುತ್ತಿದ್ದವು. ಕೆಲವೆಡೆ ಮಹಿಳೆಯರು ರಂಗೋಲಿ ಹಾಕಿ ಮಾರ್ಗವನ್ನು ಸಿಂಗರಿಸಿದ್ದರು. ಮತ್ತೆ ಕೆಲವೆಡೆ ಹೂವಿನ ಮಳೆಗರೆದು ಅಭಿಮಾನ ಮೆರೆದರು. ಕಾರ್ಯಕರ್ತರು, ಅಭಿಮಾನಿಗಳ ಬೈಕ್ ಹಾಗೂ ಕಾರಿನ ಮುಂಭಾಗದಲ್ಲಿ ಮ್ಯಾರಥಾನ್ ಹಾಗೂ ಜಿಸಿಎಲ್ ಗದಗ ಹಬ್ಬದ ಬ್ಯಾನರ್‌ಗಳು ರಾರಾಜಿಸುತ್ತಿದ್ದವು.

ADVERTISEMENT

ಒಟ್ಟಾರೆಯಾಗಿ, ಅವಳಿ ನಗರ ಗದಗ-ಬೆಟಗೇರಿಯಲ್ಲಿ ಭಾನುವಾರ ಮ್ಯಾರಥಾನ್ ಗುಂಗು ಹಿಡಿದಿತ್ತು. ಕಾರ್ಯಕರ್ತರು, ಅಭಿಮಾನಿಗಳ ಟಪ್ಪಾಂಗುಚ್ಚಿ, ಬಂಜಾರ ಸಮುದಾಯದ ಮಹಿಳೆಯರ ನೃತ್ಯ ಮ್ಯಾರಥಾನ್‌ಗೆ ಮೆರುಗು ನೀಡಿತು. ಮ್ಯಾರಥಾನ್ ರೂವಾರಿ ಅನಿಲ್‌ ಅವರು ಮುಳಗುಂದ ನಾಕಾದಲ್ಲಿ ಬಂಜಾರ ನೃತ್ಯಕ್ಕೆ ಹೆಜ್ಜೆಹಾಕಿ ಪ್ರೋತ್ಸಾಹಿಸಿದರು.

ಆಯಾ ವಾರ್ಡ್‌ಗಳ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಕ್ರೀಡಾಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮ್ಯಾರಥಾನ್ ಆರಂಭಕ್ಕೂ ಮುನ್ನ 35ನೇ ವಾರ್ಡ್ ಪ್ರತಿನಿಧಿಸುವ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರು ಅನಿಲ್‌ ಮೆಣಸಿನಕಾಯಿ ಅವರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರ ನೀಡಿ, ಶುಭಕೋರಿದರು.

ಕಳಸಾಪೂರ ರಿಂಗ್ ರಸ್ತೆ ವೃತ್ತದಿಂದ ಆರಂಭವಾದ ಮ್ಯಾರಥಾನ್ ಬಸವೇಶ್ವರ ಶಾಲೆಯ ಹಿಂಭಾಗದ ರಸ್ತೆ, ಅಂಬಾಭವಾನಿ ದೇವಸ್ಥಾನ, ವೀರೇಶ್ವರ ನಗರ, ಮುಳಗುಂದ ನಾಕಾ, ಚನ್ನಮ್ಮ ವೃತ್ತ, ಬನ್ನಿಕಟ್ಟಿಯಿಂದ ತ್ರಿಕೂಟೇಶ್ವರ ದೇವಸ್ಥಾನ, ಜೋಡಮಾರುತಿ ದೇವಸ್ಥಾನ, ಒಕ್ಕಲಗೇರಿಯ ರಾಚೋಟೇಶ್ವರ ದೇವಸ್ಥಾನ, ಗಂಜಿ ಬಸವೇಶ್ವರ ವೃತ್ತ, ಹನುಮಾನ ಗರಡಿ ಮೂಲಕ ಶ್ರೀ ವೀರನಾರಾಯಣ ದೇವಸ್ಥಾನದ ಮುಂಭಾಗ, ಶರಣಬಸವೇಶ್ವರ ದೇವಸ್ಥಾನ, ಹೊಸಪೇಟೆ ಚೌಕ, ಗಾಂಧಿ ಚೌಕ, ಸುಭಾಸರಸ್ತೆ, ರಾಮಮಂದಿರ, ನರಸಾಪೂರ ಮೂಲಕ ರಂಗಪ್ಪಜ್ಜನ ಮಠಕ್ಕೆ ತಲುಪಿ ಮ್ಯಾರಥಾನ್ ಸಮಾಪ್ತಿಗೊಂಡಿತು.

ಗದಗ ಸ್ಪೋರ್ಟ್ಸ್‌ ಆ್ಯಂಡ್‌ ಕಲ್ಚರಲ್ ಆಕಾಡೆಮಿ ಅಧ್ಯಕ್ಷ ಸಿದ್ಧಲಿಂಗೇಶ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಮುಖಂಡರಾದ ಕಾಂತಿಲಾಲ್ ಬನಸಾಲಿ, ಎಂ.ಎಂ.ಹಿರೇಮಠ, ಜಗನ್ನಾಥಸಾ ಭಾಂಡಗೆ, ಮಹೇಶ ದಾಸರ, ಗದಗ ಶಹರ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮಿ ಮಾನ್ವಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಇದ್ದರು.

ಹಣ್ಣಿನ ತುಲಾಭಾರ

‘ರನ್ ಫಾರ್ ವಿನ್’ ಮ್ಯಾರಥಾನ್ ಟಾಂಗಾಕೂಟ ತಲುಪಿದಾಗ ಮ್ಯಾರಥಾನ್‌ ರೂವಾರಿ ಅನಿಲ್‌ ಮೆಣಸಿನಕಾಯಿ ಅವರಿಗೆ ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನ ಹಾಗೂ ಅನಿಲ ಮೆಣಸಿನಕಾಯಿ ಅಭಿಮಾನಿ ಬಳಗದವರು ಹಣ್ಣು ಹಾಗೂ ಎಳನೀರಿನಿಂದ ತುಲಾಭಾರ ನಡೆಸಿದರು. ಬಳಿಕ ಇದೇ ಹಣ್ಣುಗಳನ್ನು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದವರಿಗೆ ಹಂಚಲಾಯಿತು.

ಅನಿಲ್‌ ಮೆಣಸಿನಕಾಯಿ ಅವರಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕ್ರೀಡಾ ಹಬ್ಬ ಆಯೋಜಿಸಿದರೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡದಂತಾಗುತ್ತದೆ.
ದೀಪಕ್‌ಗೌಡ, ಕಿರುತೆರೆ ನಟ

ಕ್ರೀಡಾಪಟುಗಳಿಗೆ ಹೊಸ ಚೈತನ್ಯ ಮೂಡಿಸುವ ಉದ್ದೇಶದಿಂದ ‘ರನ್ ಫಾರ್ ವಿನ್’ ಆಯೋಜಿಸಲಾಗಿತ್ತು. ನಗರದ ಜನತೆ ಹಬ್ಬದ ರೀತಿ ಸಿದ್ಧತೆ ಮಾಡಿಕೊಂಡು, ಸ್ವಾಗತಿಸಿದರು. ಜನರಿಂದ ಸಿಕ್ಕ ಬೆಂಬಲ ನಮ್ಮ ಚಟುವಟಿಕೆ ಮತ್ತಷ್ಟು ಹೆಚ್ಚಿಸುವಂತೆ ಪ್ರೇರೇಪಿಸಿದೆ.
ಅನಿಲ್‌ ಮೆಣಸಿನಕಾಯಿ, ಮ್ಯಾರಾಥಾನ್ ರೂವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.