ADVERTISEMENT

ವೈದ್ಯಕೀಯ ಕಾನೂನು ಸಮ್ಮೇಳನ ಜೂನ್‌ 14ರಿಂದ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:23 IST
Last Updated 12 ಜೂನ್ 2025, 16:23 IST

ಗದಗ: ‘ಭಾರತೀಯ ವೈದ್ಯಕೀಯ ಸಂಘ ಗದಗ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ಶಾಖೆಯ ಸಹಯೋಗದಲ್ಲಿ ಜೂನ್‌ 14 ಮತ್ತು 15ರಂದು ರಾಜ್ಯ ಮಟ್ಟದ ವೈದ್ಯಕೀಯ ಕಾನೂನು ಸಮ್ಮೇಳನವನ್ನು ಕೆ.ಎಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಡಾ. ಪವನ್‌ ಕುಮಾರ್‌ ಪಾಟೀಲ ತಿಳಿಸಿದರು.

‘ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಜೂನ್‌ 14ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟಿಸುವರು. ರಾಷ್ಟ್ರೀಯ ಐಎಂಎ ಅಧ್ಯಕ್ಷ ಡಾ. ದಿಲೀಪ್‌ ಬನ್ಸಾಲಿ, ಕರ್ನಾಟಕ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ. ವೈ.ಸಿ.ಯೋಗಾನಂದ ರಡ್ಡಿ, ಡಾ. ಚಿನ್ನವಾಲರ, ಕೆ.ಎಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಭಾಗವಹಿಸುವರು’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಕ್ಕೆ ವೈದ್ಯರ ಮೇಲೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗೆ ಪ್ರಕರಣದ ದಾಖಲಾದ ಸಂದರ್ಭದಲ್ಲಿ ವೈದ್ಯರು ಎದೆಗುಂದದೆ ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಸಮ್ಮೇಳನದಲ್ಲಿ ತಿಳಿವಳಿಕೆ ಮೂಡಿಸಲಾಗುವುದು. ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ವಿಚಾರ ಹಂಚಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಪ್ರತಿಯೊಬ್ಬ ಸಂಪನ್ಮೂಲ ವ್ಯಕ್ತಿ 20 ನಿಮಿಷ ವಿಷಯ ಮಂಡನೆ ಮಾಡಲಿದ್ದು, ಉಳಿದ 20 ನಿಮಿಷ ವೈದ್ಯರೊಂದಿಗೆ ಸಂವಾದ ನಡೆಸುವರು. ಮೆಡಿಕಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಳು ಯಾವ ರೀತಿ ನಡೆಯುತ್ತವೆ ಎಂಬುದರ ನೈಜ ಅನುಭವವನ್ನು ಕಟ್ಟಿಕೊಡಲು ಮೂರು ಅಣಕು ನ್ಯಾಯಾಲಯ ನಡೆಸಲಾಗುವುದು. ರಾಜ್ಯದಲ್ಲಿ ವೈದ್ಯಕೀಯ ಪ್ರಕರಣಗಳನ್ನು ನಡೆಸುವಲ್ಲಿ ನಿಪುಣತೆ ಸಾಧಿಸಿರುವ ವಕೀಲ ಜೋಗೇರ ಮತ್ತು ಅವರ ತಂಡ ಇದನ್ನು ನಡೆಸಿಕೊಡಲಿದೆ’ ಎಂದರು.

‘ಈ ಸಮ್ಮೇಳನವು ವೈದ್ಯರು ಕಾನೂನಿನ ತಿಳಿವಳಿಕೆಯೊಂದಿಗೆ ವೃತ್ತಿ ಮುಂದುವರಿಸಲು ನೆರವಾಗಲಿದೆ. ವೈದ್ಯಕೀಯ ಕಾನೂನಿನ ಬಗ್ಗೆ ತಿಳಿವಳಿಕೆಯಿಂದ ಸಾರ್ಜನಿಕರಿಗೂ ಅನುಕೂಲ ಆಗಲಿದೆ. ಸಮ್ಮೇಳನದಲ್ಲಿ ಭಾಗವಹಿಸಲು 400 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.

ಸಮ್ಮೇಳನದ ಸಂಘಟನಾ ಅಧ್ಯಕ್ಷೆ ಡಾ. ರಾಧಿಕಾ ಕುಲಕರ್ಣಿ ಮಾತನಾಡಿ, ‘ಎರಡು ದಿನಗಳ ಸಮ್ಮೇಳನದಲ್ಲಿ ಮೆಡಿಕಲ್‌ ಡಾಕ್ಯುಮೆಂಟೇಷನ್‌, ವೃತ್ತಿ ಬದ್ಧತೆ, ಕಾನೂನು ತೊಡಕುಗಳು ಎದುರಾದಾಗ ಅವುಗಳನ್ನು ಎದುರಿಸುವ ಬಗೆ, ಕಾಯ್ದೆ ಮತ್ತು ಕಾನೂನುಗಳ ತಿಳಿವಳಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸಲಾಗುವುದು’ ಎಂದರು.

ಡಾ. ತುಕಾರಾಂ ಸೂರಿ, ಡಾ. ರೇಶ್ಮಿ, ಡಾ. ಅನುಪಮಾ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.