ADVERTISEMENT

ಜನರ ಚಿತ್ತ ಕಾಂಗ್ರೆಸ್‌ನತ್ತ:‌ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:09 IST
Last Updated 29 ಅಕ್ಟೋಬರ್ 2020, 4:09 IST

ಗದಗ: ‘ಕಾಂಗ್ರೆಸ್‌ನತ್ತ ಜನರ ಚಿತ್ತ ಹೊರಳುತ್ತಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಎಂ.ಕುಬೇರಪ್ಪ ಅವರು ಗೆಲ್ಲುವ ವಿಶ್ವಾಸ ಇದೆ’ ಎಂದು ಗದಗ ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

‘ಕುಬೇರಪ್ಪ ಅವರ ಸೇವೆ, ಹೋರಾಟ, ಶೋಷಣೆ ವಿರುದ್ಧ ಅವರು ಎತ್ತಿರುವ ಧ್ವನಿ, ಕಾಂಗ್ರೆಸ್‌ ಪಕ್ಷದಿಂದ ಸರ್ವಾನುಮತದ ಅಭ್ಯರ್ಥಿಯಾಗಿರುವ ಹಿನ್ನೆಲೆ, ಗ್ರಾಮೀಣ ಭಾಗದಲ್ಲಿ ಅವರು ಹೊಂದಿರುವ ಅಪಾರ ಸ್ನೇಹಿತ ಬಳಗ, ವಿಶ್ವವಿದ್ಯಾಯಗಳ ಮೂಲಕ ಅವರು ಮಾಡಿರುವ ಸೇವೆ, ಇವೆಲ್ಲವೂ ಕುಬೇರಪ್ಪ ಅವರಿಗೆ ಶ್ರೀರಕ್ಷೆ ಆಗಿವೆ. ಜನರ ಒಲವು ಈಗ ಬಿಜೆಪಿಯಿಂದ ಕಾಂಗ್ರೆಸ್‌ನತ್ತ ಹರಿಯುತ್ತಿದೆ. ಈ ಎಲ್ಲ ಕಾರಣಗಳಿಂದ ಕುಬೇರಪ್ಪ ಅವರು ಆರಿಸಿ ಬರುವುದು ಖಚಿತ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಪಕ್ಷ ತನ್ನ ಹೋರಾಟಗಳಿಂದಲೇ ಜನರ ಮನಸ್ಸಿನ ಮೇಲೆ ಛಾಪು ಮೂಡಿಸಿದೆ. ಈಗ ನಡೆಯುತ್ತಿರುವ ವಿಧಾನ ಪರಿಷತ್‌ನ ನಾಲ್ಕು ಸ್ಥಾನ ಹಾಗೂ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ’ ಎಂದು ಹೇಳಿದರು.

ADVERTISEMENT

‘ಶಿರಾ ಉಪಚುನಾವಣೆಯಲ್ಲಿ ಜಯಚಂದ್ರ ಅವರು ಗೆಲುವು ಖಚಿತ. ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಪ್ರತಿ ಗ್ರಾಮಕ್ಕೂ ಸಿಸಿ ರಸ್ತೆಗಳನ್ನು ಮಾಡಿಸಿದ್ದಾರೆ. ಶಿರಾದ ಒಟ್ಟು ಅಭಿವೃದ್ಧಿಗಾಗಿ ಅವರು ಶ್ರಮಿಸಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳೇ ಅವರಿಗೆ ಗೆಲುವು ತಂದುಕೊಡಲಿದೆ. ಶಿರಾ ಕ್ಷೇತ್ರ ಕಾಂಗ್ರೆಸ್‌ ಪಕ್ಷದ ಗಂಡುಮೆಟ್ಟಿದ ಸ್ಥಳ. ಅಲ್ಲಿ ನಮ್ಮ ಗೆಲುವು ಖಚಿತ’ ಎಂದು ಹೇಳಿದರು.

ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿ, ‘ಚುನಾವಣೆ ನಂತರ ಶಾಸಕರ ಅಭಿಪ್ರಾಯ ಪಡೆದು ನಂತರ ವರಿಷ್ಠರ ತೀರ್ಮಾನದಂತೆ ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆ. ಇದು ನಮ್ಮ ‍ಪಕ್ಷದ ಪದ್ಧತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.