ADVERTISEMENT

ರೋಚಕ ಸೈಕ್ಲಿಂಗ್‌ ಸ್ಪರ್ಧೆಗೆ ವೇದಿಕೆ ಸಜ್ಜು

ಗದುಗಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಎಂಟಿಬಿ ಟ್ರ್ಯಾಕ್‌ ನಿರ್ಮಾಣ

ಸತೀಶ ಬೆಳ್ಳಕ್ಕಿ
Published 18 ಫೆಬ್ರುವರಿ 2021, 4:06 IST
Last Updated 18 ಫೆಬ್ರುವರಿ 2021, 4:06 IST
ಬಿಂಕದಕಟ್ಟಿ ಎಂಟಿಬಿ ಟ್ರ್ಯಾಕ್‌ನಲ್ಲಿ ಬುಧವಾರ ಅಭ್ಯಾಸ ನಡೆಸಿದ ಸೈಕ್ಲಿಸ್ಟ್‌ಗಳು
ಬಿಂಕದಕಟ್ಟಿ ಎಂಟಿಬಿ ಟ್ರ್ಯಾಕ್‌ನಲ್ಲಿ ಬುಧವಾರ ಅಭ್ಯಾಸ ನಡೆಸಿದ ಸೈಕ್ಲಿಸ್ಟ್‌ಗಳು   

ಗದಗ: ಸೈಕ್ಲಿಂಗ್‌ ಸ್ಪರ್ಧೆಯನ್ನು ಹಬ್ಬದಂತೆ ಸಂಭ್ರಮಿಸುವ ಕರ್ನಾಟಕದ ಜನತೆ ಈಗ 17ನೇ ರಾಷ್ಟ್ರ ಮಟ್ಟದ ಎಂಟಿಬಿ ಸೈಕ್ಲಿಂಗ್‌ ಸ್ಪರ್ಧೆಯ ರೋಮಾಂಚನಕಾರಿ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ. ಸೈಕ್ಲಿಂಗ್‌ ಕ್ರೀಡೆಯ ಹತ್ತುಹಲವು ರೋಚಕ ಕ್ಷಣಗಳನ್ನು ಸೈಕ್ಲಿಂಗ್‌ ಮೋಹಿಗಳಿಗೆ ಮೊಗೆದು ಕೊಡಲು ಗದುಗಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಟ್ರ್ಯಾಕ್‌ ಕೂಡ ಸಜ್ಜುಗೊಂಡಿದೆ.

ಇಲ್ಲಿನ ಎಂಟಿಬಿ ಟ್ರ್ಯಾಕ್‌ ವೀಕ್ಷಣೆ ನಡೆಸಿರುವ ಸೈಕಲ್‌ ಫೆಡರೇಷನ್‌ ಆಫ್‌ ಇಂಡಿಯಾದ (ಸಿಎಫ್‌ಐ) ಅಧಿಕಾರಿಗಳು ಸೈಕ್ಲಿಂಗ್‌ನಲ್ಲಿ ಪಂಟರ್‌ ಎನಿಸಿಕೊಂಡಿರುವವರಿಗೂ ಕಠಿಣ ಸವಾಲೊಡ್ಡುವ ಟ್ರ್ಯಾಕ್‌ ಇದಾಗಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿನ ಮಣ್ಣಿನಲ್ಲಿ ಸಣ್ಣ ಸಣ್ಣ ಕಲ್ಲುಗಳು ಹೆಚ್ಚಿರುವುದರಿಂದ ಸೈಕ್ಲಿಸ್ಟ್‌ಗಳು ಜಾರಿ ಬೀಳುವ ಸಂಭವ ಹೆಚ್ಚಿದೆ. ಜತೆಗೆ ಹಳ್ಳ, ದಿಣ್ಣೆ, ಗುಂಡಿಗಳು, ದಿಬ್ಬ ಪ್ರದೇಶ ಇವೆಲ್ಲವೂ ಸೈಕ್ಲಿಸ್ಟ್‌ಗಳ ಕೌಶಲವನ್ನು ಪ್ರತಿಕ್ಷಣವೂ ಓರೆಗೆ ಹಚ್ಚುತ್ತವೆ. ಇದರಿಂದಾಗಿ ವೀಕ್ಷಕರಿಗೆ ಉಸಿರು ಬಿಗಿ ಹಿಡಿದು ನೋಡುವಂತಹ ದೃಶ್ಯಗಳು ಸಿಗಲಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫೆ.18ರ ಸಂಜೆ 5ಕ್ಕೆ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಫೆ.19ರಿಂದ 21ರವರೆಗೆ ಸೈಕ್ಲಿಂಗ್‌ ಕ್ರೀಡೆಯ ರೋಮಾಂಚನಕಾರಿ ದೃಶ್ಯಗಳನ್ನು ಎದೆಗಿಳಿಸಿಕೊಳ್ಳುವ ಅವಕಾಶ ಸೈಕ್ಲಿಂಗ್‌ ಪ್ರಿಯರಿಗೆ ಲಭ್ಯವಾಗಲಿದೆ.

ADVERTISEMENT

ಸ್ಪರ್ಧೆಯಲ್ಲಿ ಆರ್ಮಿ ಅಡ್ವೆಂಚರ್‌ ವಿಂಗ್‌, ಇಂಡಿಯನ್‌ ಏರ್‌ಫೋರ್ಸ್‌, ಎಸ್‌ಎಸ್‌ಬಿ, ಸಿಎಫ್‌ಐನ ಘಟಾನುಘಟಿ ಸೈಕ್ಲಿಸ್ಟ್‌ಗಳ ಜತೆಗೆ ಲೇಹ್‌ ಮತ್ತು ಲಖಾಡ್‌, ಅರುಣಾಚಲಪ್ರದೇಶ, ಅಸ್ಸಾಂ, ಚಂಡೀಗಡ, ಬಿಹಾರ, ಹಿಮಾಚಲಪ್ರದೇಶ, ಹರಿಯಾಣ, ಗುಜರಾತ್‌, ಮಣಿಪುರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಕೇರಳ, ಜಾರ್ಖಂಡ್‌, ಪಶ್ಚಿಮಬಂಗಾಳ ಸೇರಿದಂತೆ ಒಟ್ಟು 25 ರಾಜ್ಯಗಳ 435 ಸೈಕ್ಲಿಸ್ಟ್‌ಗಳು ಸ್ಪರ್ಧೆಯಲ್ಲಿ ಮಿಂಚು ಹರಿಸಲಿದ್ದಾರೆ.

ಕರ್ನಾಟಕ ರಾಜ್ಯ ಅತ್ಯುತ್ತಮ ಸೈಕ್ಲಿಸ್ಟ್‌ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಗಳ ಜತೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಸೈಕ್ಲಿಸ್ಟ್‌ಗಳು ಕರ್ನಾಟಕ ತಂಡದಲ್ಲಿ ಇದ್ದಾರೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿರುವ ಬೆಂಗಳೂರಿನ ಕಿರಣ್‌ರಾಜ್‌, ಮೈಸೂರಿನ ವೈಶಾಖ್‌ ಮತ್ತು ಎಡೊನಿಸ್‌ ಕರ್ನಾಟಕ ತಂಡದ ಸ್ಟಾರ್‌ ಸೈಕ್ಲಿಸ್ಟ್‌ಗಳಾಗಿದ್ದಾರೆ.

‘ವಿವಿಧ ರಾಜ್ಯಗಳ ಸೈಕ್ಲಿಸ್ಟ್‌ಗಳು ಈಗಾಗಲೇ ಗದಗ ನಗರಕ್ಕೆ ಬಂದಿಳಿದಿದ್ದು, ಕೆಲವರು ವಾರದಿಂದಲೇ ಟ್ರ್ಯಾಕ್‌ನಲ್ಲಿ ಅಭ್ಯಾಸ ಕೂಡ ನಡೆಸಿದ್ದಾರೆ. ಉತ್ತಮ ಎಂಟಿಬಿ ಟ್ರ್ಯಾಕ್‌ ಸಿದ್ಧಗೊಂಡಿದ್ದು ಅದರ ಸಂಪೂರ್ಣ ಶ್ರೇಯಸ್ಸು ಗದಗ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲುತ್ತದೆ’ ಎನ್ನುತ್ತಾರೆ ರಾಜ್ಯ ಸೈಕ್ಲಿಂಗ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್‌.ಎಂ.ಕುರಣಿ.

ಗದುಗಿನ ಎಂಟಿಬಿ ಟ್ರ್ಯಾಕ್‌ ಅದ್ಭುತ’

‘ಕಳೆದ ವರ್ಷ ಉತ್ತರಾಖಂಡ್‌ನಲ್ಲಿ ಸೈಕ್ಲಿಂಗ್‌ ಸ್ಪರ್ಧೆ ನಡೆದಿತ್ತು. ಗದುಗಿನ ಎಂಟಿಬಿ ಟ್ರ್ಯಾಕ್‌ ಅಲ್ಲಿಗಿಂತ ಅದ್ಭುತ ಮತ್ತು ಅತ್ಯುತ್ತಮವಾಗಿದೆ’ ಎಂದು ಸಿಎಫ್‌ಐನ ಮಹಾಕಾರ್ಯದರ್ಶಿ ಮನೀಂದರ್‌ ಪಾಲ್‌ ಸಿಂಗ್‌.

‘ಎಂಟಿಬಿ ಟ್ರ್ಯಾಕ್‌ ಸಿದ್ಧಪಡಿಸುವುದು ಅತ್ಯಂತ ಕಠಿಣ ಕೆಲಸ. ಸೈಕ್ಲಿಸ್ಟ್‌ಗಳ ಸೈಕ್ಲಿಂಗ್‌ ಕೌಶಲ, ಚಾಕಚಕ್ಯತೆ ಹಾಗೂ ತಂತ್ರಗಾರಿಕೆಯನ್ನು ಕ್ಷಣಕ್ಷಣಕ್ಕೂ ಓರೆಗೆ ಹಚ್ಚುವಂತಿರಬೇಕು. ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಿದ್ದ ಸ್ಪರ್ಧಿಗಳು ಕೂಡ ಈ ಟ್ರ್ಯಾಕ್‌ ನೋಡಿ ದಂಗಾಗಿದ್ದಾರೆ. ಸೈಕ್ಲಿಸ್ಟ್‌ಗಳಿಗೆ ಕಠಿಣ ಸವಾಲು ಒಡ್ಡುವ ಈ ಟ್ರ್ಯಾಕ್‌ ನೋಡುಗರ ಖುಷಿಯ ಮೀಟರ್‌ ದ್ವಿಗುಣಗೊಳಿಸಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.