ADVERTISEMENT

ರೈತರ ಸಾಲಕ್ಕೆ ಬೆಳೆವಿಮೆ ಜಮಾ ಮಾಡದಿರಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:03 IST
Last Updated 23 ಏಪ್ರಿಲ್ 2025, 15:03 IST
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಅಕ್ಕಪಕ್ಕದ ರೈತರು ಬೆಳೆವಿಮೆ ಹಣವನ್ನು ರೈತರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಅಕ್ಕಪಕ್ಕದ ರೈತರು ಬೆಳೆವಿಮೆ ಹಣವನ್ನು ರೈತರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ರೈತರ ಬೆಳೆವಿಮೆ ಹಾಗೂ ಬೆಳೆಹಾನಿ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿ ತಾಲ್ಲೂಕಿನ ಡಂಬಳ ಗ್ರಾಮದ ಅಕ್ಕಪಕ್ಕದ ರೈತರು ಡಂಬಳ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸ್ಥಳೀಯ ಘಟಕ ವ್ಯವಸ್ಥಾಪಕ ಶ್ರೀಧರ ದೊಡ್ಡಮನಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

2024-25ನೇ ಸಾಲಿನ ಬೆಳೆಹಾನಿ ಮತ್ತು ಗೋವಿನಜೋಳ ಬೆಳೆವಿಮೆ ಹಣವು ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗಿದೆ. ಬ್ಯಾಂಕ್ ಅಧಿಕಾರಿಗಳು ಬೆಳೆವಿಮೆ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಹಣ ನೀಡಲು ಹಿಂದೇಟು ಹಾಕುತ್ತಿದ್ದು, ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳು ರೈತರಿಗೆ ಬೆಳೆವಿಮೆ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳು ಹಾಗೂ ಬೆಲೆಬಾಳುವ ಜಮೀನನ್ನು ಅಡವಿಟ್ಟು ರೈತರು ಸಾಲ ಪಡೆದುಕೊಂಡಿರುತ್ತಾರೆ. ರೈತರು ಪಡೆದುಕೊಳ್ಳುವ ಸಾಲಕ್ಕೆ ಜಮೀನಿನ ಉತಾರಗಳಲ್ಲಿ ಅಧಿಕೃತವಾಗಿ ಬೋಜಾ ಹಾಕಿರುತ್ತಾರೆ. ಹೀಗಿರುವಾಗ, ರೈತರಿಗೆ ದೊರೆತ ಬೆಳೆವಿಮೆಯನ್ನು ಸಾಲಕ್ಕೆ ಜಮೆ ಮಾಡಿಕೊಂಡರೆ ರೈತರು ಏನು ಮಾಡಬೇಕು ಎಂದು ರೈತರು ಪ್ರಶ್ನಿಸಿದರು.

ADVERTISEMENT

ವಿಮಾ ಕಂಪನಿ ಹಾಗೂ ಸರ್ಕಾರ ಮಂಜೂರು ಮಾಡಿರುವ ಬೆಳೆವಿಮೆ ಹಣವನ್ನು ಪಡೆದುಕೊಳ್ಳಲು ರೈತರು ಕಳೆದ ಹಲವು ದಿನಗಳಿಂದ ಬ್ಯಾಂಕಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ಎರಡು, ಮೂರು ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡದಿದ್ದಲ್ಲಿ ಬ್ಯಾಂಕ್ ಎದುರು ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.

ಶಾಸಕ ಜಿ.ಎಸ್.ಪಾಟೀಲ ಅವರು ರೈತ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಕರೆಮಾಡಿ ಮಾತನಾಡಿ, ‘ಬೆಳೆವಿಮೆ ಹಾಗೂ ಬೆಳೆಹಾನಿ ಪರಿಹಾರವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ಈ ಕುರಿತು ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ರೈತ ಮುಖಂಡರಾದ ಗೋಣಿಬಸಪ್ಪ ಕೊರ್ಲಹಳ್ಳಿ, ಭೀಮಪ್ಪ ಬಚನಹಳ್ಳಿ, ಪಿ.ಎಸ್.ಹುಡೇದ, ಬಿ.ಎಚ್.ಶಿವರಡ್ಡಿ, ಎಸ್.ಎಂ.ಶಿವರಡ್ಡಿ, ಯು.ಎಸ್.ಸಂದಿಗೌಡ, ಸುರೇಶ ಬೆಟಗೇರಿ, ಸಿದ್ದಪ್ಪ ಪಲ್ಲೇದ, ಭರಮಪ್ಪ ಎಪ್ಪೇರಿ, ಯಲ್ಲಪ್ಪ ಮೇವುಂಡಿ, ಈರಣ್ಣ ಚನ್ನಹಳ್ಳಿ, ಪ್ರಹ್ಲಾದ ಬಚನಹಳ್ಳಿ, ಶೇಖಪ್ಪ ಕರಿಗಾರ, ಭೀಮಪ್ಪ ಯಂಡಿಗೇರಿ, ಹನಮಪ್ಪ ಬಚನಹಳ್ಳಿ, ಮೈಲಾರಪ್ಪ ಹರಿಜನ, ಗವಿಸಿದ್ದಪ್ಪ ಉಪ್ಪಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.