ಶಿರಹಟ್ಟಿ: ಚರಂಡಿಗಳಿಲ್ಲದೆ ಗಬ್ಬೆದ್ದು ನಾರುತ್ತಿರುವ ಬಡವಾಣೆಗಳು, ಪ್ರಾರಂಭವಾಗದ ಶುದ್ಧ ಕುಡಿಯುವ ನೀರಿನ ಘಟಕ, ಮಳೆ ಹಾಗೂ ಚರಂಡಿ ನೀರಿಗೆ ಕೆಸರು ಗದ್ದೆಯಂತಾದ ರಸ್ತೆಗಳು, ಸೇತುವೆ ಸಮಸ್ಯೆ ಸೇರಿದಂತೆ ಸಮಸ್ಯೆಗಳ ನಡುವೆಯೇ ಜೀವನ ನಡೆಸುತ್ತಿರುವ ನಮ್ಮ ಗೋಳು ಹೇಳತೀರದಾಗಿದೆ ಎಂದು ನಾಗರಮಡುವು ಗ್ರಾಮಸ್ಥರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲೊಂದಾದ ನಾಗರಮಡುವು ಗ್ರಾಮದಲ್ಲಿ 4-5 ಸಾವಿರ ಜನಸಂಖ್ಯೆ ಇದ್ದು, ಸುಮಾರು 400 ಮನೆಗಳಿವೆ. 4 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದ ಗ್ರಾಮವಾಗಿದ್ದು, ಇದು ಕೊಗನೂರು ಗ್ರಾಮ ಪಂಚಾಯಿತಿಗೆ ಒಳಪಡುತ್ತದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಗ್ರಾಮವಾಗಿದ್ದು, ಇಲ್ಲಗಳ ಮಧ್ಯೆ ಜೀವನ ಸಾಗಿಸುತ್ತಿರುವ ಗ್ರಾಮಸ್ಥರ ಬದುಕು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದಂತಾಗಿದೆ.
ಶೌಚಾಲಯಗಳ ಕೊರತೆ:
ಸರ್ಕಾರ ಇಂದು ಸ್ವಚ್ಛ ಭಾರತ್ ಅಭಿಯಾನ ಹಾಗೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಈ ಗ್ರಾಮಕ್ಕೆ ಯೋಜನೆಗಳು ಸರಿಯಾಗಿ ದೊರೆಯದೆ ಅಭಿವೃದ್ಧಿ ಆಗುತ್ತಿಲ್ಲ. ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆಯೇ ರಸ್ತೆಬದಿಯಲ್ಲಿಯೇ ಶೌಚ ಮಾಡುತ್ತಿರುವುದರಿಂದ ಅನೈರ್ಮಲ್ಯ ಉಂಟಾಗುತ್ತಿದೆ. ಈ ಗ್ರಾಮದಲ್ಲಿ ಸ್ವಚ್ಛತೆ ಸಂಪೂರ್ಣ ಕಣ್ಮರೆಯಾಗಿದೆ.
ರೋಗಗಳಿಗೆ ತುತ್ತಾಗುತ್ತಿರುವ ಗ್ರಾಮಸ್ಥರು:
ನಾಗರಮಡುವು ಗ್ರಾಮದಲ್ಲಿ ಸಮರ್ಪಕವಾದ ಚರಂಡಿಗಳ ವ್ಯವಸ್ಥೆ ಇಲ್ಲ. ಅವೈಜ್ಞಾನಿಕವಾಗಿ ನಿರ್ಮಾಣವಾದ ಚರಂಡಿಗಳಿಂದ ನೀರು ಶೇಖರಣೆಯಾಗಿ ಸಾಂಕ್ರಾಮಿಕ ರೋಗಗಳನ್ನು ಅಹ್ವಾನಿಸುತ್ತಿದೆ. ನಿರ್ವಹಣೆ ಕೊರತೆಯಿಂದ ಸಂಜೆಯಾಗುತ್ತಿದಂತೆ ಸೊಳ್ಳೆಕಾಟದಿಂದ ಜನರು ನೆಮ್ಮದಿಯ ನಿದ್ರೆ ಮಾಡಲು ಆಗುತ್ತಿಲ್ಲ. ಇದರಿಂದ ಮಲೇರಿಯಾ ಸೇರಿದಂತೆ ಜ್ವರದಿಂದ ಮಕ್ಕಳು ಸೇರಿ ವಯೋವೃದ್ಧ ಬಳಲುತ್ತಿದ್ದಾರೆ.
ಪ್ರಾರಂಭವಾಗದ ನೀರಿನ ಘಟಕ:
ಗ್ರಾಮದಲ್ಲಿ ಫ್ಲೋರೈಡ್ ನೀರು ಪೂರೈಕೆಯಾಗುತ್ತಿರುವುದನ್ನು ತಡೆಗಟ್ಟಲು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ಘಟಕ ಸ್ಥಗಿತಗೊಂಡರೂ ಅದನ್ನು ದುರಸ್ತಿಗೊಳಿಸಿ ಪ್ರಾರಂಭಿಸುವ ಗೋಜಿಗೆ ಯಾರೊಬ್ಬ ಅಧಿಕಾರಿಗಳು ಹೋಗಿಲ್ಲ. ಸದ್ಯ ಫ್ಲೋರೈಡ್ ನೀರನ್ನೇ ಕುಡಿಯುತ್ತಿರುವ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಹಲ್ಲು ನೋವು, ಮಂಡಿನೋವು ಸೇರಿದಂತೆ ಇತರೇ ರೋಗಗಳು ಉಲ್ಬಣಗೊಳ್ಳುತ್ತಿವೆ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.
ನಮ್ಮ ಊರಿನ ಸೇತ್ವೆ ಬಿರಕ್ ಬಿಟ್ಟ್ ಎಲ್ಲಾ ಹಾಳಾಗಿ ಹೊಂಟೈತ್ರಿ ಬಸ್ಟ್ಯಾಂಡಿಂದಾ ಬಿಜ್ಜೂರಮಟ ಗಟಾರ ಮತ್ತ ರಸ್ತೆ ಮಾಡಿದ್ರಾ ಬಾಳ ಅನುಕೂಲ ಆಕೈತ್ರೀ...ರಾಮಜ್ಜ ಗ್ರಾಮಸ್ಥ
ನಾಗರಮಡವು ಗ್ರಾಮದ ಸೇತುವೆ ಶಿಥಿಲವಾದ ಬಗ್ಗೆ ಗಮನಕ್ಕೆ ಬಂದಿದ್ದು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದುರಾಮಣ್ಣ ದೊಡ್ಡಮನಿ ತಾ.ಪಂ ಇಒ
ಕೆಸರು ಗದ್ದೆಯಂತಾಗುವ ರಸ್ತೆ
ಗ್ರಾಮದ ಕೆಲವು ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳ ಮುಂಭಾಗವೇ ತ್ಯಾಜ್ಯ ನೀರು ಹರಿಯುತ್ತದೆ. ಸೂಕ್ತ ರಸ್ತೆ ನಿರ್ಮಾಣವಾಗದೆ ಮಳೆಗಾಲದಲ್ಲಿ ಬಂದರೆ ಕೆಸರಿನ ಮಜ್ಜನ ಆಗುವುದಂತೂ ಗ್ಯಾರಂಟಿ. ಚರಂಡಿ ನೀರಿನೊಂದಿಗೆ ಮಳೆ ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ಸಂಚಕಾರ ತರುತ್ತದೆ ಎಂಬುದು ನಿವಾಸಿಗಳ ಅಳಲು. ಸಂಚಾರ ಕಡಿಮೆ ಇರುವ ಕೆಲ ರಸ್ತೆಯ ನಿರ್ವಹಣೆ ಮಾಡದ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ರಸ್ತೆಯ ಮೇಲೆ ಗಿಡಗಂಟಿಗಳು ಬೆಳೆದು ನಿಂತಿವೆ. ಬಸ್ ನಿಲ್ದಾಣದಿಂದ ಬಿಜ್ಜೂರವರೆಗಿನ ರಸ್ತೆ ಹಾಗೂ ಚರಂಡಿಗಳು ಕಿತ್ತುಹೋಗಿ ಗ್ರಾಮದ ತ್ಯಾಜ್ಯ ನೀರು ರಸ್ತೆಯಲ್ಲಿಯೇ ಶೇಖರಣೆಗೊಂಡ ದೊಡ್ಡ ತೆಗ್ಗುಗಳು ನಿರ್ಮಾಣವಾಗಿವೆ.
ಶಿಥಿಲಾವಸ್ಥೆಯಲ್ಲಿರುವ ಸೇತುವೆ
ನಾಗರಮಡುವು ಗ್ರಾಮದ ದೊಡ್ಡ ಹಳ್ಳಕ್ಕೆ ನಿರ್ಮಾಣ ಮಾಡಲಾದ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಮಳೆ ನೀರಿನ ರಭಸಕ್ಕೆ ಸೇತುವೆ ತಳಭಾಗದಲ್ಲಿನ ಕಾಂಕ್ರೀಟ್ ಕಿತ್ತು ಹೋಗಿದೆ. ಮಳೆ ಹೀಗೆ ಮುಂದುವರಿದು ನೀರಿನ ಹರಿವು ಹೆಚ್ಚಾದರೆ ಸೇತುವೆ ಮುಗುಚಿ ಬೀಳುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸೇತುವೆ ಮೇಲೆ ಸಂಚರಿಸಿದರೂ ಕ್ರಮ ಕೈಗೊಳ್ಳದೆ ಜಾಣ ಕುರುಡುತನ ತೋರುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.