ADVERTISEMENT

ರೈತ ಹುತಾತ್ಮ ದಿನಾಚರಣೆ: ‘ಸತ್ತವರು ರೈತರು; ರಾಜಕಾರಣಿಗಳಲ್ಲ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:32 IST
Last Updated 22 ಜುಲೈ 2021, 3:32 IST
ನರಗುಂದದಲ್ಲಿ ರೈತಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ವೀರಗಲ್ಲಿಗೆ ನಮನ ಸಲ್ಲಿಸಿದರು
ನರಗುಂದದಲ್ಲಿ ರೈತಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ವೀರಗಲ್ಲಿಗೆ ನಮನ ಸಲ್ಲಿಸಿದರು   

ನರಗುಂದ: 1980ರಲ್ಲಿ ನಡೆದ ರೈತ ಹೋರಾಟವಾಗಲಿ, ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಹೋರಾಟದಲ್ಲಿ ಸತ್ತವರು ರೈತರು. ಯಾವ ರಾಜಕಾರಣಿಗಳೂ ಹೋರಾಟ ಮಾಡಿ ಮೃತರಾಗಿಲ್ಲ ಎಂದು ರೈತಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬದಮಠ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆದ 41ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿ, ರೈತ ಬಂಡಾಯ ಮುಗಿದು 41ವರ್ಷಗಳಾಗಿದೆ. ಬಂಡಾಯ ದಿಂದಲೇ ರೈತರಿಗೊಂದು ಶಕ್ತಿಬಂದಿದೆ. ಸಂಘಟಿತ ಶಕ್ತಿಯೇ ಎಲ್ಲದಕ್ಕೂ ಪರಿಹಾರ ಎಂಬುದನ್ನು ರೈತರು ಮರೆಯಬಾರದು ಎಂದರು.

ಮಹದಾಯಿಗಾಗಿ 7 ವರ್ಷದಿಂದ ಹೋರಾಟ ನಡೆದಿದೆ. ಜಾಗೃತಿಯ ಕೊರತೆಯಿಂದ ರೈತರ ಹೋರಾಟಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ರೈತರಿಗಾಗಿ ನಡೆಯುವ ಹೋರಾಟಗಳ ಮಧ್ಯೆ ರೈತರು ಮತ್ತು ಪೊಲೀಸ್ ಸಿಬ್ಬಂದಿ ಸಾವನ್ನಪ್ಪುತ್ತಿದ್ದಾರೆ ಎಂದರು.

ಕಲ್ಮೇಶ್ವರಸ್ವಾಮಿಗಳು, ಶಿವಪ್ಪ ಹೊರಕೇರಿ, ವೀರಬಸಪ್ಪ ಹೂಗಾರ, ಎಸ್.ಬಿ.ಜೋಗನ್ಣವರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ರಾಘವೇಂದ್ರ ಗುಜಮಾಗಡಿ, ಅರ್ಜುನ ಮಾನೆ, ಶ್ರೀಶೈಲ ಮೇಟಿ, ಮುತ್ತಣ್ಣ್ ಕುರಿ, ಹನಮಂತ ಮಡಿವಾಳರ, ಮಲ್ಲಣ್ಣ ಓಲೇಕಾರವೆಂಕಪ್ಪ ಹುಜರತ್ತಿ, ಬಸವ್ವ ಪೂಜಾರಿ, ಅನಸವ್ವ ,ಶಿಂದೆ, ವಾಸು ಚವಾಣ, ಶಿವಪ್ಪ ಸಾತಣ್ಣವರ, ಕೆ.ಎಚ್.ಮೊರಬದ ಇದ್ದರು.

ಕಳಸಾ–ಬಂಡೂರಿ ಸಮಿತಿ: ಕಳಸಾಬಂಡೂರಿ ಹೋರಾಟ ಕೇಂದ್ರ ಸಮಿತಿಯಿಂದ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ನೇತೃತ್ವದಲ್ಲಿ ರೈತ ಹುತಾತ್ಮ ದಿನಾಚರಣೆ ನಡೆಯಿತು. ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಗಳ ಮೇಲೆ ಒತ್ತಡ ಹೇರಲು ಸಭೆ ನಡೆಸಿ, ಹೋರಾಟದ ರೂಪುರೇಷೆ ಚರ್ಚಿಸಲಾಗುವುದು ಎಂದರು.

ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಅಪೋಜಿ, ವಸಂತ ಪಡಗದ, ರುದ್ರಗೌಡ ರಾಚನಗೌಡ್ರ, ಅನೀಲಕುಮಾರ ಕಡ್ಲಿಕೊಪ್ಪ, ಮಹಾದೇವಪ್ಪ ತಡಹಾಳ, ಶಂಕರಪ್ಪ ಯರಗಟ್ಟಿ, ಗೋವೀಂದರಡ್ಡಿ ತಿಮ್ಮರಡ್ಡಿ, ಡಾ.ಶಿವಯೋಗಿ ಹಿರೇಮಠ, ವಿಜಯ ಕೋತಿನ, ಬಸು ತಳವಾರ ಇದ್ದರು.

ನಂಜುಂಡಸ್ವಾಮಿಗೆ ಭಾರತರತ್ನ ನೀಡಲಿ: ರೈತ ಸಂಘದ ಸಂಸ್ಥಾಪಕರಾಗಿದ್ದ ದಿ.ಎಂ.ಡಿ.ನಂಜುಂಡಸ್ವಾಮಿಯವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ನೀಡಿ ರೈತ ಸಮುದಾಯಕ್ಕೆ ಗೌರವ ಸಲ್ಲಿಸಬೇಕೆಂದು ಕಬ್ಬು ಬೆಳೆಗಾರರ ರಾಜ್ಯ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಆಗ್ರಹಿಸಿದರು.

ರಾಜ್ಯದಲ್ಲಿ ರೈತ ವಿರೋಧಿ ನೀತಿ ಹೆಚ್ಚಾಗಿದೆ. ಯಾವುದೇ ನೀರಾವರಿ ಯೋಜನೆ ಸಾಕಾರಗೊಳ್ಳುತ್ತಿಲ್ಲ. ಇದರಿಂದ ರೈತರು ಶೋಷಣೆಗೆ ಒಳಗಾಗುವಂತಾಗಿದೆ. ರಾಜಕಾರಣಿ ಗಳು ಮರಕೋತಿ ಆಟ ನಿಲ್ಲಿಸಬೇಕು ಎಂದು ರಾಜ್ಯ ರೈತಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.