ನರೇಗಲ್: ಪಟ್ಟಣದ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್. ಅವರು ಬಿಸಿಯೂಟದ ಗುಣಮಟ್ಟ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಊಟ ಸವಿದರು.
ಶಾಲೆಯ ವ್ಯವಸ್ಥೆ, ಬಿಸಿಯೂಟ, ಹಾಗೂ ಶಿಕ್ಷಕರ ಬೋಧನೆಯ ಕುರಿತು ವಿದ್ಯಾರ್ಥಿನಿಗಳೊಂದಿಗೆ ಚರ್ಚಿಸಿದರು. ಊಟದ ಬಳಿಕ ಕಂಪ್ಯೂಟರ್ ಲ್ಯಾಬ್‌ಗೆ ಹೋಗಿ ಪ್ರೋಜೆಕ್ಟರ್ ಬಳಕೆ ಹಾಗೂ ಕಲಿಕಾ ವಿಧಾನ ಪರಿಶೀಲಿಸಿದರು. ಮಕ್ಕಳಿಗೆ ಗೂಗಲ್ ಫಾರ್ಮ್ ರಚನೆ, ಹಾಗೂ ಇತರೆ ಕ್ರೀಯಾತ್ಮಕ ಚಟುವಟಿಕೆ ಕಲಿಸುವ ತಿಳಿಸಿದರು.
ಭೂದಾನಿಗಳಾದ ಆನಂದ ಕುಲಕರ್ಣಿ ಹಾಗೂ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎಸ್.ಜಿ. ಗುಳಗಣ್ಣವರ ಶಾಲೆ ಸುತ್ತಲೂ ಕಾಂಪೌಂಡ್ ನಿರ್ಮಾಣ ಹಾಗೂ ಅಗತ್ಯ ಸೌಕರ್ಯ ಒದಗಿಸಲು ಮನವಿ ಸಲ್ಲಿಸಿದರು. ಈ ಕುರಿತು ಸಿಇಒ ಭರತ ಎಸ್. ಅವರು ಪಿಯು ಕಾಲೇಜು ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಇನ್ನುಳಿದ ಸೌಲಭ್ಯಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಗಜೇಂದ್ರಗಡ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ಸಹಾಯ ನಿರ್ದೇಶಕ ಬಸವರಾಜ ಬಡಿಗೇರ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಫಣಿಬಂದ, ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ, ಆರ್.ಎಸ್. ನರೇಗಲ್ ಇದ್ದರು.
ಫಲಿತಾಂಶ ಹೆಚ್ಚಿಸಲು ಸೂಚನೆ
ಇಷ್ಟೊಂದು ಸುಂದರ ವಾತಾವರಣ ಸುಸಜ್ಜಿತ ಕಟ್ಟಡ ಶಿಕ್ಷಕರ ಬಳಗವಿದೆ. ಅದನ್ನು ಮಕ್ಕಳ ಪ್ರಗತಿ ಹಾಗೂ ಉತ್ತಮ ಫಲಿತಾಂಶಕ್ಕೆ ಬಳಸಬೇಕು. ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ವೈಯಕ್ತಿಕ ಕಾಳಜಿ ಮಾಡುವ ಮೂಲಕ ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಬೇಕು. ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭರತ ಎಸ್. ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.