ADVERTISEMENT

ನರೇಗಲ್ | ಭ್ರಷ್ಟಾಚಾರ ಮುಚ್ಚಿಕೊಳ್ಳುವ ಪ್ರಯತ್ನ:‌ ಅನುಮಾನಕ್ಕೆ ಎಡೆ ಮಾಡಿದ ಸಭೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 5:36 IST
Last Updated 5 ಜುಲೈ 2025, 5:36 IST
<div class="paragraphs"><p>ನರೇಗಲ್‌ ಪಟ್ಟಣ ಪಂಚಾಯಿತಿ</p></div>

ನರೇಗಲ್‌ ಪಟ್ಟಣ ಪಂಚಾಯಿತಿ

   

ನರೇಗಲ್:‌ ಸ್ಥಳೀಯ ಪಟ್ಟಣ ಪಂಚಾಯಿರಿ ಕಚೇರಿಯಲ್ಲಿ ಕಡತಗಳ ವಿಚಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಕೋಟ್ಯಂತರ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ವಿಪಕ್ಷಗಳು ಆರೋಪ ಮಾಡುತ್ತಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಫಕೀರಪ್ಪ ಮಳ್ಳಿಯವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಗೆ ಮಾಧ್ಯಮದವರನ್ನು ಆಹ್ವಾನಿಸದೇ ದೂರವಿಟ್ಟು ಸಭೆ ನಡೆಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ. ಸಭೆಯಲ್ಲಿ ನಡೆಯುವ ವಿಷಯಗಳು ಜನತೆಗೆ ತಲುಪಬಾರದು ಎಂಬ ಧೋರಣೆ ಆಡಳಿತದ್ದಾಗಿದೆ. ಆಡಳಿತ ಯಂತ್ರದಲ್ಲಿ ಪಾರದರ್ಶಕತೆ ಇಲ್ಲವಾಗಿದೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮಿಷ್ಟದಂತೆ ಆಡಳಿತ ನಡೆಸುತ್ತಿರುವುದು ಖಂಡನೀಯ ಎಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಪಟ್ಟಣ ಪಂಚಾಯಿತಿ ಸಭೆ, ಸಮಾರಂಭಗಳಿಗೆ ಪತ್ರಕರ್ತರನ್ನು ಕರೆಸಿ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸುವುದು, ಕಾರ್ಯಗಳನ್ನು ಜನರಿಗೆ ತಿಳಿಸುವುದು ನಡೆದು ಬಂದಿರುವ ಪರಂಪರೆ. ಈಗಿನ ಆಡಳಿತ ಇದನ್ನು ಮುರಿದಿದೆ. ಪಟ್ಟಣದಲ್ಲಿ ಜನರಿಂದ ಸಂಗ್ರಹ ಮಾಡಿದ ತೆರಿಗೆ ಹಣವನ್ನು ಸ್ಥಳೀಯ ಆಡಳಿತದ ನಿರ್ಲಕ್ಷ್ಯತನದಿಂದ ಪೋಲಾಗುತ್ತಿದೆ. ಇವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಹೀಗಾಗಿ ಸಭೆಯಲ್ಲಿ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜತೆಗೆ ಪತ್ರಕರ್ತರನ್ನು ದೂರವಿಟ್ಟು ಸಭೆ ಮಾಡಿದ್ದಾರೆ’ ಎಂದು ವಿರೋಧ ಪಕ್ಷದ ಸದಸ್ಯ ಮಲ್ಲಿಕಾರ್ಜುನಗೌಡ ಭೂಮಗೌಡ್ರ ದೂರಿದರು.

‘ಸಾಮಾನ್ಯ ಸಭೆಯ ಮೊದಲು ಪೂರ್ವಬಾವಿ ಸಭೆ ಕರೆಯುವಂತೆಯು ಅನೇಕ ಬಾರಿ ತಿಳಿಸಿರುವೆ. ಅದನ್ನು ಪರಿಗಣಿಸಿಲ್ಲ. ನಾನು ಪ್ರಶ್ನೆ ಮಾಡುತ್ತೇನೆ ಎನ್ನುವ ಕಾರಣಕ್ಕೆ ಈ ಬಾರಿ ನಮ್ಮನ್ನು ಸಹ ಕಡೆಗಣಿಸಲಾಗಿದೆ. ಪ್ರತಿಬಾರಿಯಂತೆ ಮಾಹಿತಿ ತಿಳಿಸದೇ ಲಕೋಟೆ ಕಳುಹಿಸಿ ಸಭೆ ಇದೆ ಎಂದು ಹೇಳಿದ್ದಾರೆ. ಹಿಂದಿನ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕೆಲ ವಿಷಯಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದವು. ಕೆಲ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಆದಕಾರಣ ದೂರವಿಟ್ಟು ಸಭೆ ಮಾಡಿದ್ದಾರೆ’ ಎಂದು ವಿರೋಧ ಪಕ್ಷದ ಸದಸ್ಯೆ ಜ್ಯೋತಿ ಪಾಯಪ್ಪಗೌಡ್ರ ಆರೋಪಿಸಿದರು.

ಪತ್ರಕರ್ತರನ್ನು ಆಹ್ವಾನಿಸುವುದು ಬೇಡವೆಂದು ನಾನು ಎಲ್ಲೂ ಹೇಳಿಲ್ಲ. ಆದರೆ ಪತ್ರಕರ್ತರು ಒಂದಕ್ಕೆ ಎರಡು ಬರೆಯುತ್ತಾರೆ ಎಂದು ಮುಖ್ಯಾಧಿಕಾರಿಗಳೇ ಬೇಡ ಎಂದರು
-ಫಕೀರಪ್ಪ ಮಳ್ಳಿ ಅಧ್ಯಕ್ಷ ‌
ಪ್ರತಿಬಾರಿಯಂತೆ ಪತ್ರಕರ್ತರನ್ನು ಆಹ್ವಾನಿಸುತ್ತಾರೆ ಎಂದುಕೊಂಡು ಸುಮ್ಮನಿದ್ದೆ. ಆದರೆ ಸಭೆಗೆ ಕರೆದಿಲ್ಲವೆಂದು ಸಭೆ ಮುಗಿದ ಬಳಿಕ ಗೊತ್ತಾಗಿದೆ
-ಕುಮಾರಸ್ವಾಮಿ, ಕೋರಧಾನ್ಯಮಠ ಉಪಾಧ್ಯಕ್ಷ
ಪತ್ರಕರ್ತರನ್ನು ಸಭೆಗೆ ಆಹ್ವಾನಿಸುವ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಾಗ ಇದೇನು ಮುಗಿದು ಹೋಗುತ್ತದೆ ಮುಂದೆ ಕರೆಯೋಕೆ ಬರುತ್ತದೆ. ಈ ಸಭೆ ಮುಗಿದ ಬಳಿಕ ನಾನೇ ಪತ್ರಿಕಾ ಪ್ರಕಟಣೆ ನೀಡುತ್ತೇನೆ. ಹೀಗಾಗಿ ಆಹ್ವಾನಿಸುವುದು ಬೇಡ ಎಂದು ಸಲಹೆ ನೀಡಿದರು
-ಮಹೇಶ ಬಿ. ನಿಡಶೇಶಿ, ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.