ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಹಳೆಯ ಹಾಗೂ ಹೊಸ ಶೌಚಾಲಯಗಳು ನಿರ್ಮಾಣವಾಗಿವೆ. ಜತೆಗೆ ಬೇಸಿಗೆ ರಜೆಯಲ್ಲಿಯೇ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಯು ಶೌಚಾಲಯ ದುರಸ್ತಿ ಹಾಗೂ ನಿರ್ಮಾಣಕ್ಕೆ ಸೂಚನೆ ನೀಡಲಾಗಿತ್ತು.
ರಜೆಯಲ್ಲಿ ಹಾಳಾಗಿದ್ದ ಶೌಚಾಲಯಗಳು ಇಂದು ಸಮರ್ಪಕವಾಗಿ ಬಳಕೆಗೆ ಲಭ್ಯವಾಗಿವೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಶೌಚಾಲಯಗಳ ಅಗತ್ಯವಿದೆ. ಜತೆಗೆ ಶೌಚಾಲಯಗಳ ದುರಸ್ತಿಗೆ ಒಟ್ಟು 27 ಶಾಲೆಗಳ ಮುಖ್ಯೋಪಾಧ್ಯಾಯರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬೇಡಿಕೆಯೂ ಬಂದಿದ್ದು, ಪರಿಗಣಿಸಿದ ಅಧಿಕಾರಿಗಳು ಇರುವ ಅನುಧಾನ ವಿನಿಯೋಗಿಸಿ 22 ಶಾಲೆಗಳ ಶೌಚಾಲಯಗಳನ್ನು ದುರಸ್ತಿ ಮಾಡಿದ್ದಾರೆ. ಉಳಿದ 5 ಶೌಚಾಲಯಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.
ತಾಲ್ಲೂಕಿನಲ್ಲಿ 54 ಸರ್ಕಾರಿ ಪ್ರಾಥಮಿಕ ಶಾಲೆಗಳು, 17 ಪ್ರೌಢಶಾಲೆಗಳಿವೆ. ಇವುಗಳಲ್ಲಿ ಹೆಚ್ಚಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತಿದೆ. ಆದರೆ, ಕೆಲವೆಡೆ ಸಂಖ್ಯೆಗೆ ಅನುಗುಣವಾಗಿ ಇನ್ನೂ ಶೌಚಾಲಯಗಳು ನಿರ್ಮಾಣವಾಗಬೇಕು ಎಂದು ಶಿಕ್ಷಕರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕೆಲವು ಶಾಲೆಗಳಲ್ಲಿ ಶೌಚಾಲಯ ಇದ್ದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಹೆಚ್ಚಾಗಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದು, ಕೆಲವು ಶಾಲೆಗಳಲ್ಲಿ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ. ಇಂಥ ಶಾಲೆಗಳಲ್ಲಿನ ಶೌಚಾಲಯಗಳು ದುರ್ವಾಸನೆಯಿಂದ ಕೂಡಿವೆ. ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೌಚಾಲಯ ಸೇರಿದಂತೆ ಕೆಲವು ಕಡೆಗಳಲ್ಲಿ ಶೌಚಾಲಯಕ್ಕೆ ಚಾವಣಿ ಇರದ ಕಾರಣ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ಬಾಲಕ ಹಾಗೂ ಬಾಲಕಿಯರಿಗೆ ತಲಾ ಒಂದು ಶೌಚಾಲಯವಿದೆ. ಇನ್ನೂ ಹೆಚ್ಚಿನ ಶೌಚಾಲಯಗಳು ನಿರ್ಮಾಣವಾದರೆ ಉತ್ತಮ ಎಂದು ವಿದ್ಯಾರ್ಥಿಗಳ ಪಾಲಕರು ಹೇಳುತ್ತಾರೆ. ಆದರೆ, ಶೌಚಾಲಯ ನಿರ್ಮಿಸಲು ಜಾಗೆಯ ಕೊರತೆಯೂ ಕಾಡುತ್ತಿದೆ.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರಿದ್ದಾರೆ. ಪಿಂಕ್ ಶೌಚಾಲಯ ನಿರ್ಮಾಣಗೊಂಡಿದೆ. ಆದರೆ, ಇಲ್ಲಿ ಪುರುಷ ಸಿಬ್ಬಂದಿಗೆ ಶೌಚಾಲಯವೇ ಇಲ್ಲ. ಇದಕ್ಕಾಗಿ ಮೇಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಮುಖ್ಯ ಶಿಕ್ಷಕರು ಹೇಳುತ್ತಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಅಲ್ಲಿಯೂ ಶೌಚಾಲಯಗಳು ನಿರ್ಮಾಣವಾಗಬೇಕಿದೆ. ಹದಲಿ ಸರ್ಕಾರಿ ಪ್ರೌಢ ಶಾಲೆಗೆ ಸಮರ್ಪಕ ಶೌಚಾಲಯಗಳಿದ್ದು, ಗ್ರಾಮ ಪಂಚಾಯಿತಿ ಮೂಲಕ ಸಮರ್ಪಕ ನೀರು ಪೂರೈಕೆಯಾಗಿ ಸ್ವಚ್ಛತೆಗೆ ಅವಕಾಶ ನೀಡಬೇಕಿದೆ. ಗ್ರಾಮ ಪಂಚಾಯಿತಿ ನೀರು ಪೂರೈಕೆಗೆ ಗಮನ ಹರಿಸಬೇಕಿದೆ. ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಸುಧಾರಣೆ ಆಗಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಶೌಚಾಲಯಗಳು ನಿರ್ಮಾಣ ಆಗಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.
ಸಂಖ್ಯೆ ಆಧಾರದಲ್ಲಿ ಶೌಚಾಲಯ ನಿರ್ಮಾಣ
ಈಗ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಮೂತ್ರಾಲಯಗಳಿವೆ. ಆದರೆ, ಅವುಗಳಲ್ಲಿ 27 ಶಾಲೆಗಳಲ್ಲಿನ ಶೌಚಾಲಯಗಳಲ್ಲಿ ಅಲ್ಪ ಪ್ರಮಾಣದ ರಿಪೇರಿಗೆ ಬೇಡಿಕೆ ಬಂದಿತ್ತು. ಅವುಗಳಲ್ಲಿ ಶೇ 98ರಷ್ಟು ಶಾಲೆಗಳಲ್ಲಿ ರಿಪೇರಿ ಮುಗಿದಿದೆ. ಉಳಿದ ಶಾಲೆಗಳಲ್ಲಿ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೆಲವು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣವಾಗಬೇಕಿದೆ. ನಿರ್ವಹಣೆಯೂ ನಡೆದು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ನರಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಗುರುನಾಥ ಹೂಗಾರ ತಿಳಿಸಿದರು.
ಆದರೆ, ಹೆಚ್ಚಿನ ಶೌಚಾಲಯಗಳ ನಿರ್ಮಾಣಕ್ಕೆ ಪುರಸಭೆ, ಪಂಚಾಯಿತಿಗಳಿಗೆ ಮನವಿ ಮಾಡಲಾಗಿದೆ. ನರಗುಂದ ಪಟ್ಟಣದ ಶಾಲೆಗಳ ಶೌಚಾಲಯಗಳನ್ನು ಪುರಸಭೆ ಹಾಗೂ ಗ್ರಾಮೀಣ ಶಾಲೆಗಳಲ್ಲಿನ ಶೌಚಾಲಯಗಳನ್ನು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯ ವಿಶೇಷ ಅನುದಾನದನದಲ್ಲಿ ನಿರ್ಮಾಣಗೊಳ್ಳಬೇಕು. ಇದಕ್ಕಾಗಿ ಪುರಸಭೆಗೂ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಆಧಾರದ ಮೇಲೆ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ ಗುರುತಿಸಿ ಹೊಸ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಪಿಂಕ್ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಪುರುಷ ಬೋಧಕ/ಬೋಧಕೇತರ ಸಿಬ್ಬಂದಿಗೆ ಶೌಚಾಲಯ ಅವಶ್ಯವಿದ್ದು, ಬೇಡಿಕೆ ಸಲ್ಲಿಸಲಾಗಿದೆಎಸ್.ಎಸ್.ಹಿರೇಮಠ, ಮುಖ್ಯೋಪಾಧ್ಯಾಯರು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.