ADVERTISEMENT

ಹೊಸರೀತಿಯ ಬದಲಾವಣೆಗೆ ಸ್ಫೂರ್ತಿದೀ‍ಪ

ಹೊಸ ಶಿಕ್ಷಣ ನೀತಿ 2020ರ ಅನುಷ್ಠಾನ: ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 6:44 IST
Last Updated 15 ಜುಲೈ 2021, 6:44 IST
ಶೈಕ್ಷಣಿಕ ಸಲಹೆಗಾರ ಡಾ. ರಾಜೇಂದ್ರ ಕುಮಾರ್ ಜೋಶಿ ಅವರು ವಿಶ್ವವಿದ್ಯಾಲಯದ ಬೋಧಕ ವರ್ಗದವರೊಂದಿಗೆ ಸಂವಾದ ನಡೆಸಿದರು
ಶೈಕ್ಷಣಿಕ ಸಲಹೆಗಾರ ಡಾ. ರಾಜೇಂದ್ರ ಕುಮಾರ್ ಜೋಶಿ ಅವರು ವಿಶ್ವವಿದ್ಯಾಲಯದ ಬೋಧಕ ವರ್ಗದವರೊಂದಿಗೆ ಸಂವಾದ ನಡೆಸಿದರು   

ಗದಗ: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಈ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ’ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಹೇಳಿದರು.

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ‘ವಿಶ್ವವಿದ್ಯಾಲಯದಲ್ಲಿ ಹೊಸ ಶಿಕ್ಷಣ ನೀತಿ 2020ರ ಅನುಷ್ಠಾನ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಇದೇ ಶೈಕ್ಷಣಿಕ ವರ್ಷದಿಂದ ಪದವಿ ಕೋರ್ಸುಗಳನ್ನು ಪರಿಚಯಿಸಲಿದೆ’ ಎಂದು ಅವರು ಹೇಳಿದರು.

ADVERTISEMENT

ಸಂಪನ್ಮೂಲ ವ್ಯಕ್ತಿ ಹಾಗೂ ಹೊಸ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಪ್ರೊ. ಎಂ.ಕೆ.ಶ್ರೀಧರ್ ಮಾತನಾಡಿ, ‘ಹೊಸ ಶಿಕ್ಷಣ ನೀತಿಯ ಅನುಷ್ಠಾನವು ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಈ ನೀತಿಯು ಪ್ರಮುಖವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಬಹಳ ನಿಕಟವಾಗಿ ಇರಲಿದೆ’ ಎಂದು ಹೇಳಿದರು.

ಶಿಕ್ಷಣ ಸಲಹೆಗಾರ ಡಾ. ರಾಜೇಂದ್ರ ಕುಮಾರ್ ಜೋಶಿ ಅವರು, ಹೊಸ ಶಿಕ್ಷಣ ನೀತಿಯ ಕುರಿತಾದ ಪಕ್ಷಿನೋಟ, ಸಮಗ್ರ ಅಂತರಶಿಸ್ತೀಯ ಶಿಕ್ಷಣ ಹಾಗೂ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳ ಸಂಭಾವ್ಯ ಫಲಿತಾಂಶ ಕುರಿತಂತೆ ಕಾರ್ಯಾಗಾರದಲ್ಲಿ ವಿಷಯ ಮಂಡನೆ ಮತ್ತು ಸಂವಾದ ನಡೆಸಿಕೊಟ್ಟರು.

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರಶಾಂತ್ ಜೆ.ಸಿ. ಮಾತನಾಡಿ, ‘ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಆಲೋಚನಾಶಕ್ತಿ ಹಾಗೂ ಕಲ್ಪನಾಶಕ್ತಿಯನ್ನು ವಿಸ್ತರಿಸಲಿದೆ’ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ ಸ್ವಾಗತಿಸಿದರು. ಮಂಜುನಾಥ್ ಚನ್ನಪ್ಪಗೌಡ ಕಾರ್ಯಾಗಾರದಲ್ಲಿ ಭಾಗಿಯಾದ ಅತಿಥಿಗಳನ್ನು ಪರಿಚಯಿಸಿದರು. ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಉಪನ್ಯಾಸಕರು ಇದ್ದರು. ಐಕ್ಯುಎಸಿ ಸಂಯೋಜಕ ಡಾ. ಅಭಯ್ ಗಸ್ತಿ ವಂದಿಸಿದರು. ಡಾ. ಸೌಮ್ಯ ಪ್ರಶಾಂತ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.