ADVERTISEMENT

ನಿಡಸೋಸಿ ಮಠದಿಂದ ಕನ್ನಡ ಕಟ್ಟುವ ಕೆಲಸ: ಶಾಂತಲಿಂಗ ಸ್ವಾಮೀಜಿ

‘ಕನ್ನಡದ ಗಡಿ ಕಾಯ್ದ ಲಿಂಗಾಯತ ಮಠಗಳು’ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 16:49 IST
Last Updated 26 ನವೆಂಬರ್ 2020, 16:49 IST
ಗದುಗಿನ ‌ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ಬಿ.ಎಸ್.ರಾಥೋಡ ಹಾಗೂ ಡಾ. ಸಂತೋಷ ಬೆಳವಡಿ ಅವರನ್ನು ಶಾಂತಲಿಂಗ ಸ್ವಾಮೀಜಿ ಸನ್ಮಾನಿಸಿದರು
ಗದುಗಿನ ‌ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ಬಿ.ಎಸ್.ರಾಥೋಡ ಹಾಗೂ ಡಾ. ಸಂತೋಷ ಬೆಳವಡಿ ಅವರನ್ನು ಶಾಂತಲಿಂಗ ಸ್ವಾಮೀಜಿ ಸನ್ಮಾನಿಸಿದರು   

ಗದಗ: ‘ಗಡಿ ಪ್ರದೇಶದಲ್ಲಿ ಕನ್ನಡ ಮತ್ತು ಕನ್ನಡಿಗರ ಪರಿಸ್ಥಿತಿ ಸಂಕಟಮಯವಾಗಿರುವ ಸಂದರ್ಭದಲ್ಲಿ ಮಠಗಳು ಜನರಲ್ಲಿ ಭಾಷಾ ಸಾಮರಸ್ಯ ಮೂಡಿಸಿ ಕನ್ನಡ ಕಟ್ಟುವ ಕೆಲಸ ಮಾಡಿವೆ’ ಎಂದು ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ 2,512ನೇ ಶಿವಾನುಭವದಲ್ಲಿ ‘ಕನ್ನಡದ ಗಡಿ ಕಾಯ್ದ ಲಿಂಗಾಯತ ಮಠಗಳು’ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.

‘ಕನ್ನಡದ ಅಸ್ಮಿತೆಗೆ ನಿಡಸೋಸಿ ಮಠ ಶಿವಾನುಭವ, ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಪುಸ್ತಕ ಪ್ರಕಟಣೆ ಮೂಲಕ ಅಪಾರ ಕೊಡುಗೆ ನೀಡಿದೆ. ಗಡಿಭಾಗದಲ್ಲಿ ಶಾಂತಿ ಕದಡುವ ಕಾರ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೂ ಕನ್ನಡ ಉಳಿಸುವ ಕಾರ್ಯವನ್ನು ಗಡಿಭಾಗದ ಮಠಗಳು ಮಾಡುತ್ತಿವೆ’ ಎಂದರು.

ADVERTISEMENT

‘ಕನ್ನಡಕ್ಕೆ ನಿಡಸೋಸಿ ಸಿದ್ಧಸಂಸ್ಥಾನಮಠದ ಕೊಡುಗೆ’ ವಿಷಯವಾಗಿ ಡಾ.ಗುರುಪಾದ ಮರಿಗುದ್ದಿ ಉಪನ್ಯಾಸ ನೀಡಿ, ‘ಆತ್ಮಚಿಂತನೆಯ ಜೊತೆಗೆ ಸಮಾಜ ಚಿಂತನೆಯನ್ನೂ ಜನರಲ್ಲಿ ಮೂಡಿಸುವ ಕಾರ್ಯವನ್ನು ಕಾಯಕದಂತೆ ಮಾಡಿದ ಕೀರ್ತಿ ನಿಡಸೋಸಿ ಮಠಕ್ಕೆ ಸಲ್ಲುತ್ತದೆ. ಒಕ್ಕಲುತನ ಪ್ರಧಾನ ಮಠವಾಗಿದ್ದರೂ ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಹೊಂದಿ ದಾಸೋಹ, ಪುಸ್ತಕ ಪ್ರಕಟಣೆಯಂತಹ ಕಾರ್ಯವನ್ನು ಕೈಗೆತ್ತಿಕೊಂಡು ಕನ್ನಡ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ’ ಎಂದು ಹೇಳಿದರು.

ಡಾ. ಗುರುಪಾದ ಮರಿಗುದ್ದಿ ರಚಿಸಿದ ‘ಹರಿಹರ ಮಹಾಕವಿಯ ಭೇದ ನಿರಸನ ರಗಳೆಗಳು’ ಪುಸ್ತಕದ ಲೋಕಾರ್ಪಣೆಯನ್ನು ಶಾಂತಲಿಂಗ ಶ್ರೀಗಳು ನೆರವೇರಿಸಿದರು.

ಎನ್‌ಸಿಸಿ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಮುಖ್ಯಮಂತ್ರಿ ಪದಕ ಪಡೆದ ವಿ.ಡಿ.ಎಸ್. ಕಾಲೇಜು ಉಪನ್ಯಾಸಕ ಬಿ.ಎಸ್.ರಾಥೋಡ ಹಾಗೂ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ಪಡೆದ ಸಂತೋಷ ಬೆಳವಡಿ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.

ಜನಪದ ಕಲಾವಿದರಾದ ವೀರಣ್ಣ ಅಂಗಡಿ, ಮುತ್ತಣ್ಣ ಅಂಗಡಿ, ಮಹೇಶ, ಮೋಹನ ಮೇಹರವಾಡಿ ಅವರಿಂದ ಜನಪದ ವೈವಿಧ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಸಂಘದ ಅಧ್ಯಕ್ಷ ಎಂ.ಸಿ.ಐಲಿ ಸ್ವಾಗತಿಸಿದರು. ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗೌರಕ್ಕ ಬಡಿಗಣ್ಣವರ, ವೀರಣ್ಣ ಗೊಡಚಿ, ವಿಜಯಕುಮಾರ ಹಿರೇಮಠ, ಶಶಿಧರ ಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ, ರತ್ನಕ್ಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.