ಲಕ್ಷೇಶ್ವರ: ಅತಿಯಾಗಿ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಆದರೆ, ಈ ಸ್ಥಿತಿಯಲ್ಲೂ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೇ ಕೇವಲ ಪಾರಂಪರಿಕ ನೈಸರ್ಗಿಕ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿರುವ ತಾಲ್ಲೂಕಿನ ಮಾಡಳ್ಳಿ ಗ್ರಾಮದ ರೈತ ಹನಮಂತಪ್ಪ ಚಿಂಚಲಿ ಎಲ್ಲ ರೈತರಿಗೆ ಮಾದರಿ ಆಗಿದ್ದಾರೆ.
ಹತ್ತನೇ ತರಗತಿ ಓದಿರುವ ಹನಮಂತಪ್ಪ ಭೂಮಿ ನಂಬಿ ಬದುಕುತ್ತಿರುವ ರೈತ. ಸಾವಯವ ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತ ಅದರಲ್ಲಿ ಯಶಸ್ಸು ಪಡೆದು ರೈತರಿಗೆ ಮಾರ್ಗದರ್ಶಕರಾಗಿದ್ದಾರೆ. 30 ಎಕರೆ ಜಮೀನಿನಲ್ಲಿ ನೈಸರ್ಗಿಕ ಪದ್ಧತಿಯಲ್ಲಿ ಪ್ರತಿವರ್ಷ ಹೆಸರು, ಶೇಂಗಾ, ಮೆಣಸಿನಕಾಯಿ, ಹತ್ತಿ, ಕಡಲೆ, ಕುಸುಬಿ, ಗೋಧಿ ಬೆಳೆದು ವಾರ್ಷಿಕವಾಗಿ ₹10ರಿಂದ ₹12 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಸಾವಯವ ಕೃಷಿ ಬಗ್ಗೆ ತಿಳಿದುಕೊಂಡ ಹನಮಂತಪ್ಪ ಅವರು, ಐದು ದೇಸಿ ತಳಿ ಆಕಳು, ಮೂರು ಎತ್ತುಗಳಿಂದ ದೊರೆಯುವ ಸಗಣಿಯಿಂದ ಕೊಟ್ಟಿಗೆ ಗೊಬ್ಬರ ಜತೆಗೆ ಎರೆಹುಳು, ಹಸಿರೆಲೆ ಗೊಬ್ಬರ ತಯಾರಿಸಿ, ಬಳಸುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದಿರುವ ಹನಮಂತಪ್ಪ ಅವರು ಜೀವಾಮೃತ, ಹುಳಿ ಮಜ್ಜಿಗೆ, ಗೋಪಾಮೃತ, ದಶಪರ್ಣಿ, ಗೋಮೂತ್ರ, ಬೇವು ಮಿಶ್ರಿತ ಎರೆಹುಳು ಗೊಬ್ಬರ ತಯಾರಿಸಿ ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳಿಂದ ದೂರ ಉಳಿದಿದ್ದಾರೆ.
‘ಮಳೆ ಬಾರದ ಸಂದರ್ಭದಲ್ಲಿ ಕೃಷಿಹೊಂಡದ ನೀರಿನಿಂದ ವಿವಿಧ ತರಕಾರಿ ಬೆಳೆದು ಮಾರಾಟ ಮಾಡುವ ಮೂಲಕ ಲಾಭ ಪಡೆಯುತ್ತಿದ್ದೇನೆ. ನೈಸರ್ಗಿಕ ಪದ್ಧತಿಯಲ್ಲಿ ಬೆಳೆದ ತರಕಾರಿಗಳನ್ನು ಜನರು ಹೆಚ್ಚಾಗಿ ಕೊಂಡುಕೊಳ್ಳುತ್ತಾರೆ. ಕೃಷಿಯೊಂದಿಗೆ ಐದು ಜವಾರಿ ಆಕಳುಗಳಿಂದ ಹೈನುಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇನೆ. ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಗಳು ಬೇಗನೆ ಬಾಡುವುದಿಲ್ಲ’ ಎಂದು ಹನಮಂತಪ್ಪ ಚಿಂಚಲಿ ತಿಳಿಸಿದರು.
30 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ವರ್ಷಕ್ಕೆ ₹ 10ರಿಂದ 12ಲಕ್ಷ ಆದಾಯ ದೇಶಿ ಆಕಳು ಹೈನುಗಾರಿಕೆಗೆ ಒತ್ತು
ಮಾಡಳ್ಳಿಯ ಹನಮಂತಪ್ಪ ಸಾವಯವ ಕೃಷಿ ವಿಜ್ಞಾನಿಯಾಗಿ ಯಾವುದೇ ಕಾರಣಕ್ಕೂ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸುವುದಿಲ್ಲ. ಇದರಿಂದ ಖರ್ಚು ಬಹಳಷ್ಟು ಕಡಿಮೆ ಬರುತ್ತದೆಚಂದ್ರಶೇಖರ ನರಸಮ್ಮನವರ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಅಧಿಕಾರಿ
ರೈತರು ಭೂಮಿ ತಾಯಿಯನ್ನು ನಂಬಿ ದುಡಿದರೆ ಮೋಸವಾಗುವುದಿಲ್ಲ ಎಂಬ ಮಾತನ್ನು ನಂಬಿದವನು ನಾನು. ಸಾವಯವ ಕೃಷಿ ಮಾಡಿದರೆ ಖರ್ಚು ಕಡಿಮೆ ಲಾಭ ಜಾಸ್ತಿಹನಮಂತಪ್ಪ ಚಿಂಚಲಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.