ADVERTISEMENT

ಗವಾಯಿಗಳ ಹೆಸರಲ್ಲಿ ರಾಷ್ಟ್ರ ಪ್ರಶಸ್ತಿ ಸಂತಸ ತರಿಸಿದೆ: ಪೀಠಾಧಿಪತಿ ಕಲ್ಲಯ್ಯಜ್ಜ

ಮರಣೋತ್ತರ ‘ಭಾರತ ರತ್ನ ಪ್ರಶಸ್ತಿ’ಗೆ ಶಿಫಾರಸು ಮಾಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮೇ 2022, 5:13 IST
Last Updated 20 ಮೇ 2022, 5:13 IST

ಗದಗ: ಗಾನಯೋಗಿ ಲಿಂಗೈಕ್ಯ ಪಂಡಿತ್‌ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿ ಘೋಷಿಸಿರುವುದು ಅತೀವ ಸಂತೋಷ ತರಿಸಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪಂಚಾಕ್ಷರಿ ಗವಾಯಿಗಳು ಅಂಧರು, ಅನಾಥರ ಪಾಲಿಗೆ ದೈವವಾಗಿದ್ದರು. ಅವರನ್ನೆಲ್ಲಾ ಆಶ್ರಮದಲ್ಲಿ ಇರಿಸಿಕೊಂಡು ವಸತಿ, ಪ್ರಸಾದ ವ್ಯವಸ್ಥೆ ಜತೆಗೆ ಸಂಗೀತ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕಾದರು. ಸರ್ವಧರ್ಮದ ಆಶ್ರಮವನ್ನಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಲಿಂಗೈಕ್ಯ ಪಂಡಿತ್‌ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸುವಂತೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿತ್ತು. ಆಗ ಅವರು, ಸಕಾರಾತ್ಮಕವಾಗಿ ಸ್ಪಂದಿಸಿದ್ದರಲ್ಲದೇ ಅದೇ ದಿನವೇ ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ಶಿಫಾರಸು ಪತ್ರವನ್ನೂ ಕಳಿಸಿದ್ದರು. ಬಳಿಕ ಈ ವಿಷಯ ವಿಳಂಬಗತಿಯಲ್ಲಿ ಸಾಗಿದ್ದನ್ನು ಗಮನಿಸಿದ ಸಚಿವರಾದ ಸಿ.ಸಿ.ಪಾಟೀಲ, ಶ್ರೀರಾಮುಲು, ಶಾಸಕ ಕಳಕಪ್ಪ ಬಂಡಿ ಹಾಗೂ ಯುವಮುಖಂಡ ಅನಿಲ್‌ ಮೆಣಸಿನಕಾಯಿ ಸಹಕಾರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಸ್ಥಾಪನೆಗೆ ಅನುಮತಿ ನೀಡಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ADVERTISEMENT

‘ಪಂ.ಪುಟ್ಟರಾಜ ಕವಿ ಗವಾಯಿಗಳು ಪಂ. ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಸ್ಥಾಪಿಸಬೇಕು ಎಂಬ ಕನಸು ಹೊಂದಿದ್ದರು. ಸರ್ಕಾರ ಆ ಕನಸನ್ನು ಈಡೇರಿಸಿದೆ. ಲಿಂ.ಪಂ. ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪಿಸಬೇಕು ಹಾಗೂ ವೀರೇಶ್ವರ ಪುಣ್ಯಾಶ್ರಮ ಅಭಿವೃದ್ಧಿಗೆ ಸರ್ಕಾರ ₹15 ಕೋಟಿ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಪಂಡಿತ್‌ ಗುರುಸ್ವಾಮಿ ಕಲಕೇರಿ ಮಾತನಾಡಿ, ‘ಪಂ.ಪಂಚಾಕ್ಷರಿ ಗವಾಯಿಗಳ ಸೇವೆಗೆ ರಾಜ್ಯ ಸರ್ಕಾರ ತಕ್ಕ ಗೌರವ ನೀಡಿರುವುದು ಅವರ ಶಿಷ್ಯವರ್ಗಕ್ಕೆ ಸಂತಸವನ್ನುಂಟು ಮಾಡಿದೆ’ ಎಂದರು.

ಶಿವಲಿಂಗ ಶಾಸ್ತ್ರಿ ಸಿದ್ದಾಪುರ ಮಾತನಾಡಿ, ‘ಸರ್ಕಾರ ಮೊದಲ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗದಗ ನಗರದಲ್ಲೇ ಆಯೋಜಿಸಿ, ಮುಖ್ಯಮಂತ್ರಿಗಳೇ ಬಂದು ಪ್ರಶಸ್ತಿ ಪ್ರದಾನ ಮಾಡಬೇಕು’ ಎಂದು ಹೇಳಿದರು.

ಪಂ. ಸದಾಶಿವ ಪಾಟೀಲ, ಪಂ.ಹೇಮರಾಜ ಶಾಸ್ತ್ರಿ ಹೇಡಿಗೊಂಡ, ನಿಜಗುಣಿ ಗವಾಯಿಗಳು ದಿಂಡವಾರ, ಸಿದ್ದೇಶ್ವರ ಶಾಸ್ತ್ರಿ ತೆಲ್ಲೂರ, ಪ್ರಕಾಶ ಬಸರಿಗಿಡದ ಇದ್ದರು.

ಲಿಂ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ‘ಭಾರತ ರತ್ನ ಪ್ರಶಸ್ತಿ’ಗೆ ಶಿಫಾರಸು ಮಾಡಬೇಕು. ಜೊತೆಗೆ ಅವರ ಜಯಂತಿಯನ್ನು ಸರ್ಕಾರ ರಜೆರಹಿತವಾಗಿ ಘೋಷಿಸಬೇಕು
ಕಲ್ಲಯ್ಯಜ್ಜನವರು, ವೀರೇಶ್ವರ ಪುಣ್ಯಾಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.