ಗದಗ: ‘ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಬೇಕು. ಗ್ರಾಮೀಣ ಜನರ ಜೀವನ ಯಾರಿಗೂ ಕಡಿಮೆ ಇರಬಾರದು. ಹಳ್ಳಿ ಜನರಿಗೆ ಗುಣಮಟ್ಟದ ಜೀವನ ಕಲ್ಪಿಸಲು ಗ್ರಾಮ ಪಂಚಾಯಿತಿಗಳು ಕೆಳಮಟ್ಟದಿಂದ ಮೇಲ್ಮಟ್ಟದ ಯೋಜನೆಗಳನ್ನು ರೂಪಿಸಬೇಕು’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಜಿಲ್ಲಾಡಳಿತ, ಕೆ.ಎಚ್.ಪಾಟೀಲ ಪ್ರತಿಷ್ಟಾನ ಹಾಗೂ ವಿವೇಕ ಪಥ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯ ಹಾಗೂ ವಿವೇಕ ಪಥ ಅನುಷ್ಟಾನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
‘ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಗ್ರಾಮ ಸ್ವರಾಜ್ಯ ಕಾನೂನುಗಳನ್ನು ಮಾಡಲಾಗಿದೆ. ಅವುಗಳನ್ನು ಸ್ಥಳೀಯ ಮಟ್ಟದಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಗ್ರಾಮ ಪಂಚಾಯಿತಿಗಳು ಸರ್ಕಾರದಂತೆ ಕಾರ್ಯನಿರ್ವಹಿಸಬೇಕಿದೆ’ ಎಂದರು.
‘ಗದಗ ಜಿಲ್ಲೆ ದೊಡ್ಡ ಪ್ರಯೋಗಶಾಲೆ ಇದ್ದಂತೆ. ಗಾಂಧೀಜಿ ಕಲ್ಪನೆ ಸಾಕಾರಗೊಳಿಸಲು, ಅಂಬೇಡ್ಕರ್ ಅವರ ತತ್ವಾದರ್ಶ ಅನುಷ್ಠಾನಗೊಳಿಸಲು, ರಾಜೀವ್ ಗಾಂಧಿ, ಕೆ.ಎಚ್.ಪಾಟೀಲರ ದೂರದೃಷ್ಟಿತ್ವವನ್ನು ನನಸು ಮಾಡಲು ಕುಲುಮೆಯಂತೆ ಕೆಲಸ ಮಾಡುತ್ತಿದೆ. ಅದಕ್ಕಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗದಗ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ಯ ಕಾನೂನು ಶೇ 100 ಅನುಷ್ಠಾನಗೊಳ್ಳುವಂತೆ ಕಾರ್ಯನಿರ್ವಹಿಸಬೇಕು’ ಎಂದರು.
‘ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಈಗ ವ್ಯವಸ್ಥೆ ಸರಿ ಇಲ್ಲ ಅಂತಾದರೆ ಜನರು ಪ್ರಧಾನಿ ಮೋದಿ ಅವರನ್ನೇ ಪ್ರಶ್ನಿಸುತ್ತಾರೆ. ಹಾಗಿದ್ದಮೇಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಇಲಾಖೆ ಮಂತ್ರಿಗಳನ್ನು ಇಂತಹದ್ದು ಆಗಬೇಕು ಎಂದು ಕೇಳುವ ಗಟ್ಟಿ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ, ಗ್ರಾಮ ಸ್ವರಾಜ್ಯ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತದೆ’ ಎಂದರು.
‘ಗದಗ ತಾಲ್ಲೂಕಿನಲ್ಲಿ ಶೇ 95ರಷ್ಟು ಶಾಲಾ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ಪಂಚಾಯಿತಿ ಅಧ್ಯಕ್ಷರು, ಸದಸ್ಯರು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಶೌಚಾಲಯ ಕೊಡುವುದು ಸಾಧ್ಯವಿಲ್ಲ ಅಂತಾದರೆ, ಬದುಕಿನ ಗುಣಮಟ್ಟ ಎತ್ತರಿಸಬೇಕು ಎಂಬುದಕ್ಕೆ ಅರ್ಥವೆಲ್ಲಿದೆ? ಆದ್ದರಿಂದ ವಸ್ತುಸ್ಥಿತಿ ಅರಿತು ಸಮಸ್ಯೆಗಳನ್ನು ಬಗೆಹರಿಸಲು ತಳಮಟ್ಟದಿಂದ ಮೇಲ್ಮಟ್ಟಕ್ಕೆ ಯೋಜನೆಗಳನ್ನು ಮಾಡಬೇಕಿದೆ’ ಎಂದರು.
ಮುಖ್ಯಮಂತ್ರಿಗಳು ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಶಾಸಕರ ಸಭೆ ಜರುಗಿಸಿದರು. ಜಿಲ್ಲೆಗೆ ಅಗತ್ಯವಿರುವ ಅನುದಾನ, ಯೋಜನೆಗಳ ಕುರಿತಂತೆ ಸುದೀರ್ಘ ಚರ್ಚೆಯನ್ನು ನಡೆಸಲಾಯಿತು. ಈ ವೇಳೆ ಶಾಸಕರಾದ ಜಿ.ಎಸ್.ಪಾಟೀಲರು ನಮ್ಮೊಂದಿಗಿದ್ದರು. ಗದಗ ಜಿಲ್ಲೆಯ ಸರ್ಕಾರಿ ಶಾಲೆಗಳ ಶೌಚಾಲಯಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಯೋಜನೆ ರೂಪಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿ ಶೌಚಾಲಯಗಳ ನಿರ್ಮಾಣ ಹಾಗೂ ದುರಸ್ತಿಗಾಗಿ ₹49 ಕೋಟಿ ಅನುದಾನ ಜಿಲ್ಲೆಗೆ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಸಹಕಾರ ರೇಡಿಯೋ ನಿಲಯ ನಿರ್ದೇಶಕ ಜೆ.ಕೆ. ಜಮಾದಾರ ಅವರು ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯ ಹಾಗೂ ವಿವೇಕ ಪಥದ ಉದ್ದೇಶ ಹಾಗೂ ಆಶಯಗಳನ್ನು ತಿಳಿಸಿಕೊಟ್ಟರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರ, ವಿದ್ಯಾಧರ ದೊಡ್ಡಮನಿ, ನೀಲಮ್ಮ ಬೋಳನವರ, ವೀರಣ್ನ ಹುಣಸಿಕಟ್ಟಿ, ಸಿದ್ಧಲಿಂಗೇಶ್ವರ ಪಾಟೀಲ, ಕೃಷ್ಣಗೌಡ ಪಾಟೀಲ, ಅಬ್ದುಲ್ ಕರೀಂಸಾಬ, ಶಕುಂತಲಾ ಅಕ್ಕಿ, ಎ.ಎನ್.ನಾಗರಹಳ್ಳಿ, ಎಂ.ಎ.ರಡ್ಡೇರ, ತಾಲ್ಲೂಕು ಪಂಚಾಯಿತಿ ಇಒ ಮಲ್ಲಯ್ಯ ಕೆ., ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹಿರಾಲಾಲ ಜಿನಗಾ ಸೇರಿದಂತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಪ್ರಭುವಿನೆಡೆ ಪ್ರಭುತ್ವ ಯೋಜನೆಗೆ ಚಾಲನೆ:
ಪ್ರಜೆಗಳ ದೂರು ದುಮ್ಮಾನಗಳಿಗೆ 24 ತಾಸಿನೊಳಗೆ ಸ್ಪಂದಿಸುವ ‘ಪ್ರಭುವಿನೆಡೆ ಪ್ರಭುತ್ವ’ ಎಂಬ ಹೊಸ ಯೋಜನೆಯನ್ನು ಆಗಸ್ಟ್ 15ರಂದು ಜಿಲ್ಲೆಯಲ್ಲಿ ಜಾರಿ ಮಾಡುವ ಚಿಂತನೆ ಇದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಸಾವಿರ ದೂರುಗಳಿರುತ್ತವೆ. ಅದಕ್ಕಾಗಿ ಎಸ್‌ಒಎಸ್ ಬಾಕ್ಸ್ ಇರಿಸಲಾಗುವುದು. ಇದರಲ್ಲಿ ಬಟನ್ ಒತ್ತಿ ವಿಡಿಯೊ ದೂರು ದಾಖಲಿಸಬಹುದು. ಅದು ಕಮಾಂಡ್ ಸೆಂಟರ್‌ಗೆ ಹೋಗುತ್ತದೆ. ದೂರನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಲಾಗುವುದು. ಅವರು ನಿಗದಿತ ಸಮಯದಲ್ಲಿ ಅದಕ್ಕೆ ಉತ್ತರ ಕಳಿಸುವರು. 24 ತಾಸಿನೊಳಗೆ ಸೂಕ್ತ ಸ್ಪಂದನೆ ಸಿಗಲಿದೆ ಎಂದರು
ಸರಪಂಚರಾಗಿ ದುಡಿದ ಕೆ.ಎಚ್.ಪಾಟೀಲರು:
‘ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲರು ಸಚಿವರಾಗುವವರೆಗೂ ಗ್ರಾಮದ ಸರಪಂಚರಾಗಿ ನಿರಂತರವಾಗಿ ಹಲವು ವರ್ಷಗಳವರೆಗೆ ಕಾರ್ಯನಿರ್ವಹಿಸಿ ಗ್ರಾಮಗಳ ಅಭಿವೃದ್ಧಿಗೋಸ್ಕರ ಶ್ರಮಿಸಿದ್ದಾರೆ’ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು. ‘ಗ್ರಾಮ ಸ್ವರಾಜ್ಯ ಕಾನೂನನ್ನು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನಗೊಳಿಸೋಣ. ವಾರ್ಡ್ ಹಾಗೂ ಗ್ರಾಮ ಸಭೆಗಳನ್ನು ಆಗಸ್ಟ್ 15ರೊಳಗಾಗಿ ನಡೆಸಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗಳಿಗೆ ವರದಿ ಕಳುಹಿಸಬೇಕು. ನಂತರ ಅಲ್ಲಿಂದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ’ ಎಂದರು. ‘ನಾವೆಲ್ಲರೂ ಇಂದು ನಮ್ಮ ಗ್ರಾಮಗಳ ಶಾಲೆಗಳ ಶೌಚಾಲಯ ದುರಸ್ತಿಗಳನ್ನು ಅಚ್ಚುಕಟ್ಟಾಗಿ ಅಕ್ಟೋಬರ್ 2 ರೊಳಗಾಗಿ ಪೂರ್ಣಗೊಳಿಸುತ್ತೇವೆ ಎಂಬ ದೃಢನಿರ್ಧಾರ ಕೈಗೊಳ್ಳೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.