ADVERTISEMENT

ಪೊಲೀಸರಿಂದ ವಿನೂತನ ಜಾಗೃತಿ ಜಾಥಾ

ಲಾಠಿ ಕೆಳಗಿಟ್ಟು ತಿಳಿವಳಿಕೆ ಹೇಳಿದ ಪೊಲೀಸರು; ಎಸ್‌ಪಿ ಯತೀಶ್‌ ಎನ್‌. ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 15 ಮೇ 2021, 3:41 IST
Last Updated 15 ಮೇ 2021, 3:41 IST
ಬಡಾವಣೆ ಠಾಣೆ ಪೊಲೀಸರು ಶುಕ್ರವಾರ ಹಾತಲಗೇರಿ ನಾಕಾ ವೃತ್ತದಲ್ಲಿ ಕೋವಿಡ್‌–19 ಜನ ಜಾಗೃತಿ ಜಾಥಾ ನಡೆಸಿದರು.
ಬಡಾವಣೆ ಠಾಣೆ ಪೊಲೀಸರು ಶುಕ್ರವಾರ ಹಾತಲಗೇರಿ ನಾಕಾ ವೃತ್ತದಲ್ಲಿ ಕೋವಿಡ್‌–19 ಜನ ಜಾಗೃತಿ ಜಾಥಾ ನಡೆಸಿದರು.   

ಗದಗ: ನಗರದ ಬಡಾವಣೆ ಪೊಲೀಸ್‌ ಠಾಣೆ ವತಿಯಿಂದ ಶುಕ್ರವಾರ ಹಾತಲಗೇರಿ ನಾಕಾ ವೃತ್ತದಲ್ಲಿ ಕೋವಿಡ್‌ ಜನಜಾಗೃತಿ ಜಾಥಾ ನಡೆಯಿತು.

‘ಒಬ್ಬರೆ ಇದ್ದರೆ ಕೊರೊನಾ ಬರಲ್ಲ; ಗುಂಪು ಆದ್ರೆ ಅದು ನಿನ್‌ ಬಿಡಲ್ಲ’, ‘ಮನೆಯಲ್ಲಿ ಇದ್ದರೆ ನಮ್ಮ ಇಚ್ಛೆ; ಹೊರಗೆ ಬಂದರೆ ಕೊರೊನಾ ಇಚ್ಛೆ...’ ಹೀಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಹತ್ತಾರು ಫಲಕಗಳನ್ನು ಹಿಡಿದು ಪೊಲೀಸರು ಜನರಿಗೆ ತಿಳಿವಳಿಕೆ ಹೇಳಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಿದರೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಮಾರ್ಗದರ್ಶನದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಟಿ.ಮಹಾಂತೇಶ್‌ ಹೇಳಿದರು.

ADVERTISEMENT

‘ಅಗತ್ಯ ವಸ್ತುಗಳ ಖರೀದಿಗೆ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಸಮಯ ಮುಗಿದ ನಂತರ ಸುಮ್ಮನೇ ರಸ್ತೆಯಲ್ಲಿ ಅಡ್ಡಾಡಬಾರದು. ವಸ್ತುಗಳ ಖರೀದಿಸಲು ಬಂದಾಗ ಎಲ್ಲರೂ ತಪ್ಪದೇ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಮಾತ್ರೆ ಚೀಟಿಗಳನ್ನು ಹಿಡಿದುಕೊಂಡು ವಿನಾಕಾರಣ ಸುತ್ತಾಡಬಾರದು ಎಂದು ಜನರಿಗೆ ತಿಳಿ ಹೇಳಲಾಯಿತು’ ಎಂದು ಬಡಾವಣೆ ಠಾಣೆಯ ಎಎಸ್‌ಐ ವಿ.ಎನ್‌.ಕೌಜಲಗಿ ತಿಳಿಸಿದರು.

‘ಮನೆಯಲ್ಲೇ ಇರಿ. ಇಲ್ಲಾಂದ್ರೆ ಇದೇ ನಿಮ್ಮ ಕೊನೆ ಬರ್ತಡೇ’ ಎಂಬ ಬರಹವಿದ್ದ ಕೇಕ್‌ ಅನ್ನು ಸಾರ್ವಜನಿಕರಿಂದಲೇ ಕತ್ತರಿಸಿ, ಪೊಲೀಸರು ವಿನೂತನ ರೀತಿಯಲ್ಲಿ ಜನ ಜಾಗೃತಿ ಮೂಡಿಸಿದರು. ಕೇಕ್‌ ಮೇಲಿನ ಬರಹ ನೋಡಿ ನಕ್ಕ ಜನರು, ಅದರ ಅರ್ಥದ ಅರಿವಾದ ನಂತರ ಗಂಭೀರ ವದನರಾದರು. ಅನಗತ್ಯವಾಗಿ ಅಡ್ಡಾದಿರುವ ಸಂಕಲ್ಪ ತಳೆದರು.

ಎಸ್‌ಐ ರೇಣುಕಾ ಮುಂಡೇವಾಡಿ, ಎಎಸ್‌ಐ ಚನ್ನಪ್ಪಗೌಡ್ರು ಹಾಗೂ ಪೊಲೀಸ್‌ ಸಿಬ್ಬಂದಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.