ಲಕ್ಷ್ಮೇಶ್ವರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಕೇಂದ್ರ ಕಚೇರಿ ಸೂಚನೆಯ ಮೇರೆಗೆ ಪುರಸಭೆ ಪೌರ ನೌಕರರು, ಪೌರ ಕಾರ್ಮಿಕರು ಪುರಸಭೆ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ಪೌರ ನೌಕರ ಹನಮಂತಪ್ಪ ನಂದೆಣ್ಣವರ ಮಾತನಾಡಿ ‘ಪಂಚಾಯತ್ ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಅವರಿಗೆ ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೌಲಭ್ಯ ಒದಗಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿ ದೀಪ ಸಹಾಯಕರು, ಲೋಡರ್ಸ್, ಪಾರ್ಕ್ ಗಾರ್ಡನರ್ಸ್, ಕಾವಲುಗಾರ, ಸ್ಯಾನಿಟರಿ ಸೂಪರ್‌ವೈಸರ್ ವೃಂದಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು’ ಎಂಬುದು ಸೇರಿದಂತೆ ಒಟ್ಟು ಹತ್ತು ಬೇಡಿಕೆಗಳನ್ನು ಈಡೇರಿಸಬೇಕು. 7ನೇ ವೇತನ ಹಾಗೂ 2023-24ನೇ ಸಾಲಿನಲ್ಲಿ ನೇಮಕಗೊಂಡ ಪೌರ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್ ವೇತನವನ್ನು ಎಸ್‍ಎಫ್‍ಸಿ ವೇತನ ಅನುದಾನದ ಅಡಿಯಲ್ಲಿ ನೀಡಬೇಕು. ಶಾಶ್ವತವಾಗಿ ವಾಹನ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕು. ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಮಾತನಾಡಿ, ‘ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಈಗಾಗಲೇ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಕಾಯಂ ನೇಮಕಾತಿ ಮಡಿಕೊಳ್ಳಬೇಕು. ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಉಳಿದಿರುವ ನೇರ ನೇಮಕಾತಿ ಕಡತಗಳಿಗೆ ಚಾಲನೆ ನೀಡಬೇಕು. ಕಾಯಂ ಪೌರ ಕಾರ್ಮಿಕರಿಗೆ ನೀಡಿರುವ ಗೃಹಭಾಗ್ಯ ಯೋಜನೆಯನ್ನು ಲೋಡರ್ಸ್, ಕ್ಲೀನರ್ಸ್, ನೀರು ಸರಬರಾಜು ಸಹಾಯಕರಿಗೂ ನೀಡಬೇಕು. ಸದ್ಯ ಕೊಡುತ್ತಿರುವ ₹ 7.50 ಲಕ್ಷ ಬದಲಿಗೆ₹ 15 ಲಕ್ಷ ನೀಡಬೇಕು’ ಎಂದು ಆಗ್ರಹಿಸಿದರು.
ಮಂಜುಳಾ ಹೂಗಾರ, ಮಂಜುನಾಥ ಮುದಗಲ್ಲ, ದೇವಪ್ಪ ನಂದೆಣ್ಣವರ, ಅಶೋಕ ನಡಗೇರಿ, ನೀಲಪ್ಪ ನಂದೆಣ್ಣವರ, ಮುತ್ತಪ್ಪ ದೊಡ್ಡಮನಿ, ಪರಶುರಾಮ ಮುಳಗುಂದ, ಮಂಜುನಾಥ ನಂದೆಣ್ಣವರ, ವಿಶ್ವನಾಥ ಹಾದಿಮನಿ, ಹೇಮರಾಜ ಅಣ್ಣಿಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.