ADVERTISEMENT

ಆರಂಭವಾಗದ ಮೆಕ್ಕೆಜೋಳ ಖರೀದಿ ಕೇಂದ್ರ: ರೊಚ್ಚಿಗೆದ್ದ ರೈತರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 4:52 IST
Last Updated 2 ಡಿಸೆಂಬರ್ 2025, 4:52 IST
ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗದೇ ಇರುವ ಕಾರಣ ರೈತರು ಸೋಮವಾರ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು
ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗದೇ ಇರುವ ಕಾರಣ ರೈತರು ಸೋಮವಾರ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು   

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನದ ಒಳಗೆ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಾನುವಾರ ಲಿಖಿತ ಆದೇಶದಲ್ಲಿ ತಿಳಿಸಿದ್ದರು. ಆದರೆ ಸೋಮವಾರ ಖರೀದಿ ಕೇಂದ್ರ ಆರಂಭವಾಗದೇ ಇರುವ ಕಾರಣ ರೈತರು ರೊಚ್ಚಿಗೆದ್ದು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ಆರಂಭಿಸಲಾಗುವುದು ಎಂಬ ಭರವಸೆ ಸಿಕ್ಕಿದ್ದ ಕಾರಣ, ಕಳೆದ ಹದಿನೇಳು ದಿನಗಳಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಹೋರಾಟಗಾರರು ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದರು. ಇದೇ ಖುಷಿಯಲ್ಲಿ ಬೆಳಿಗ್ಗೆ ಸೋಮೇಶ್ವರ ದೇವಸ್ಥಾನ ಹಾಗೂ ದೂದಪೀರಾಂ ದರ್ಗಾಗಳಿಗೆ ತೆರಳಿ ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದರು. ಆದರೆ ಜಿಲ್ಲಾಧಿಕಾರಿ ಬಾರದೇ ಇದ್ದ ಕಾರಣ ರೈತರು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು ಎಷ್ಟೇ ಮನವಿ ಮಾಡಿದರೂ ರೈತರು ರಸ್ತೆ ತಡೆ ನಡೆಸಿದರು. ರಸ್ತೆಯಲ್ಲಿಯೇ ನಿಂತು ಊಟ ಮಾಡಿದರು. ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಮಾತನಾಡಿ, ‘ಖರೀದಿ ಕೇಂದ್ರ ಆಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದರು.

ADVERTISEMENT

ಆದರಹಳ್ಳಿ ಕುಮಾರ ಮಹಾರಾಜರು, ‘ಸಂಜೆ 5 ಗಂಟೆ ಒಳಗೆ ಖರೀದಿ ಕೇಂದ್ರ ಆರಂಭ ಆಗದಿದ್ದರೆ ರಸ್ತೆ ಮಧ್ಯದಲ್ಲಿಯೇ ಆಮರಣಾಂತ ಉಪವಾಸ ನಡೆಸುತ್ತೇವೆ’ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಮಹೇಶ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ಪೂರ್ಣಾಜಿ ಖರಾಟೆ, ಶರಣು ಗೋಡಿ, ಸುರೇಶ ಹಟ್ಟಿ, ಚನ್ನಪ್ಪ ಷಣ್ಮುಖಿ, ಟಾಕಪ್ಪ ಸಾತಪುತೆ, ಕರಿಗೌಡ್ರ, ನೀಲಪ್ಪ ಶೆರಸೂರಿ, ರಮೇಶ ಹಂಗನಕಟ್ಟಿ ಸೇರಿದಂತೆ ನೂರಾರು ರೈತರು ಇದ್ದರು.

ತಾಲ್ಲೂಕಿನ ಬೇರೆ ಬೇರೆ ಭಾಗಗಳಿಂದಲೂ ಸಾಕಷ್ಟು ರೈತರು ಜಮಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.