ADVERTISEMENT

ಗುಡುಗು, ಸಿಡಿಲು ಸಹಿತ ಉತ್ತಮ ಮಳೆ

ಗದಗ, ಮುಳಗುಂದ,ಗಜೇಂದ್ರಗಡ, ಡಂಬಳದಲ್ಲಿ ತಂಪೆರೆದ ವರುಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 14:44 IST
Last Updated 10 ಏಪ್ರಿಲ್ 2019, 14:44 IST
ಗದುಗಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು
ಗದುಗಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು   

ಗದಗ: ಬಿಸಿಲಿನ ಧಗೆಯಿಂದ ತತ್ತರಿಸಿದ್ದ ನಗರದ ಜನತೆಗೆ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆ ತಂಪೆರೆಯಿತು. ಮುಳಗುಂದ, ಗಜೇಂದ್ರಗಡ, ಡಂಬಳದಲ್ಲೂ ಗುಡುಗು ಮಿಂಚು ಸಹಿತ ಸಾಮಾನ್ಯ ಮಳೆಯಾಗಿದೆ.

ಗದಗ–ಬೆಟಗೇರಿ ಅವಳಿ ನಗರದಲ್ಲಿ ಅರ್ಧ ಗಂಟೆ ಮಳೆ ಆರ್ಭಟಿಸಿತು. ರಭಸದ ಮಳೆಗೆ ಇಲ್ಲಿನ ಹಾತಲಗೇರಿ ನಾಕಾ, ವೆಂಕಟೇಶ ಚಿತ್ರಮಂದಿರದ ರಸ್ತೆ, ಭೂಮರೆಡ್ಡಿ ವೃತ್ತ, ಹಳೆಯ ಬಸ್‌ ನಿಲ್ದಾಣ ಸಮೀಪ ಚರಂಡಿ ನೀರು ರಸ್ತೆಗೆ ಉಕ್ಕಿ ಹರಿಯಿತು.ಹಳೆಯ ಬಸ್‌ ನಿಲ್ದಾಣದ ರಸ್ತೆಯಲ್ಲಿ, ಚಪ್ಪಲಿ ಅಂಗಡಿಯೊಂದಕ್ಕೆ ನೀರು ನುಗ್ಗಿತು.ಝೇಂಡಾ ವೃತ್ತ ಮತ್ತು ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತವು ಜಲಾವೃತಗೊಂಡು, ದ್ವಿಚಕ್ರ ವಾಹನ ಸವಾರರು ಪರದಾಡಿದರು.ಮಳೆ ನಿಂತ ನಂತರ ರಸ್ತೆಯ ತುಂಬೆಲ್ಲಾ ಪ್ಲಾಸ್ಟಿಕ್‌ ತ್ಯಾಜ್ಯ ಹರಡಿಕೊಂಡಿದ್ದವು.

ಯುಗಾದಿ ನಂತರ ಜಿಲ್ಲೆಯಲ್ಲಿ ಉಷ್ಣಾಂಶದಲ್ಲಿ ದಿಢೀರ್‌ ಏರಿಕೆಯಾಗಿತ್ತು. ಕಳೆದ ಮೂರು ವಾರಗಳಿಂದ ಸರಾಸರಿ 39 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು,ರಣ ಬಿಸಿಲಿಗೆ ಜನರು ಬಸವಳಿದಿದ್ದರು. ಅಲ್ಲಲ್ಲಿ ಒಂದೆರಡು ಹನಿ ಮಳೆಯಾಗಿದ್ದು, ಬಿಟ್ಟರೆ ಸಮರ್ಪಕವಾಗಿ ಸುರಿದಿರಲಿಲ್ಲ. ಬುಧವಾರ ಉತ್ತಮ ಮಳೆಯಾಗಿದ್ದರಿಂದ, ವಾತಾವರಣ ತಂಪಾಗಿದೆ.

ADVERTISEMENT

ರೈತರಲ್ಲಿ ಭರವಸೆ: ಯುಗಾದಿ ಬೆನ್ನಲ್ಲೇ,ಜಿಲ್ಲೆಯ ರೈತರು ಅಲ್ಲಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು.ಮಳೆಯಾಗುತ್ತಿರುವುದು ಅನ್ನದಾತರ ಭರವಸೆ ಹೆಚ್ಚಿಸಿದೆ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೈಕೊಟ್ಟು ರೈತರು ತೀವ್ರ ಬೆಳೆಹಾನಿ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.