ರಟ್ಟೀಹಳ್ಳಿ: ‘ರಾಜ್ಯದಲ್ಲಿ ಬಡವರಿಗಾಗಿ ಜಾರಿಗೊಂಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಕಾಂಗ್ರೇಸ್ ಸರ್ಕಾರದ ನಿರ್ಧಾರ ಅಚಲವಾಗಿದೆ’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಪಟ್ಟಣದ ಚಿಕ್ಕಯಡಚಿ ರಸ್ತೆಯಲ್ಲಿರುವ ತುಂಗಭದ್ರಾ ಮೇಲ್ದಂಡೆ ಮುಖ್ಯಕಾಲುವೆಯಿಂದ ಪಟ್ಟಣದ ಹಿರೇಕೆರೂರ ರಸ್ತೆ ಕೂಡುವ ಮಾರ್ಗದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘2001ರಲ್ಲಿ ನಿರ್ಮಾಣಗೊಂಡ ತುಂಗಭದ್ರಾ ಮೇಲ್ದಂಡೆ ಮುಖ್ಯಕಾಲುವೆಗೆ ಇದುವರೆಗೂ ದುರಸ್ತಿ ಕಾರ್ಯಗಳಿಗೆ ಯಾವುದೇ ಅನುದಾನ ನೀಡಿರಲಿಲ್ಲ. ಆದರೆ, ರಾಜ್ಯ ಸರ್ಕಾರ ನೀರಾವರಿಗೆ ಹೆಚ್ಚಿನ ಒತ್ತು ನೀಡಿದ್ದು, ₹39 ಕೋಟಿ ಅನುದಾನದಲ್ಲಿ ಮುಖ್ಯಕಾಲುವೆಯ ಆಯ್ದ ಭಾಗಗಳಲ್ಲಿ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗೆ ಹಣಕಾಸು ಒದಗಿಸುವುದು ಕಷ್ಟ ಎಂದು ಸಾಕಷ್ಟು ಟೀಕೆಗಳು ಬಂದರೂ ಸಮರ್ಪಕವಾಗಿ ಬಡವರಿಗಾಗಿ ಗ್ಯಾರಂಟಿ ಯೋಜನೆ ಜತೆಗೆ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ’ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಡಿ. ಬಸನಗೌಡ್ರ ಮಾತನಾಡಿ, ‘ರಟ್ಟೀಹಳ್ಳಿ, ಹಿರೇಕೆರೂರ ವಿಧಾನ ಕ್ಷೇತ್ರಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸುತ್ತಿರುವ ಶಾಸಕರ ಕಾರ್ಯವೈಖರಿ ಶ್ಲಾಘನೀಯ’ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ ಗುಬ್ಬಿ, ವೀರನಗೌಡ ಪ್ಯಾಟೀಗೌಡ್ರ, ನಾಗನಗೌಡ ಕೋಣ್ತಿ, ನಿಂಗಪ್ಪ ಚಳಗೇರಿ, ಬಿರೇಶ ಕರಡೆಣ್ಣನವರ, ಜಿಲ್ಲಾ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯ ಪರಮೇಶಪ್ಪ ಕಟ್ಟೇಕಾರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಪಕ್ಷದ ತಾಲ್ಲೂಕು ಕಾರ್ಯದರ್ಶಿ ವಸಂತ ದ್ಯಾವಕ್ಕಳವರ, ಮಂಜು ಆಸ್ವಾಲಿ, ನೀರಾವರಿ ನಿಗಮದ ಅಭಿಯಂತರ ರವಿ, ಬಸವರಾಜ, ಕೆ.ಎಂ.ಎಫ್ ಮಾಜಿ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಮಂಜು ಎಲಿವಾಳ, ಮಂಜು ಜಾಧವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.