ಲಕ್ಷ್ಮೇಶ್ವರ: ‘ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಹೊಂದಬೇಕಾದರೆ ಭಕ್ತರ ಸಹಕಾರ ಬಹಳ ಮುಖ್ಯ’ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗುಲಗಂಜಿಕೊಪ್ಪದ ದುಂಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ದುಂಡಿ ಬಸವಣ್ಣ ದೇವಸ್ಥಾನ ಭಕ್ತರ ಸಹಕಾರದಿಂದ ಕೆಲವೇ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ದೇವಸ್ಥಾನಕ್ಕೆ ಬರುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದು, ಜನಪ್ರತಿನಿಧಿಗಳು ಕೂಡಲೇ ರಸ್ತೆ ನಿರ್ಮಿಸಬೇಕು’ ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ‘ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಯವರ ಪ್ರಯತ್ನದಿಂದಾಗಿ ಅರಣ್ಯ ದೇವಸ್ಥಾನ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಾವಿರಾರು ಭಕ್ತರ ಸಹಾಯದಿಂದ ಒಂದೇ ವರ್ಷದಲ್ಲಿ ರಥ ನಿರ್ಮಾಣ ಕಾರ್ಯ ಶ್ಲಾಘನೀಯ’ ಎಂದರು.
‘25 ಕಿಮೀ ಅಂತರದಲ್ಲಿರುವ ಬೇಡ್ತಿ ನದಿಯನ್ನು ವರದಾ ನದಿಗೆ ಜೋಡಣೆ ಮಾಡಿದರೆ ಈ ಭಾಗದ ನೂರಾರು ಹೆಕ್ಟೇರ್ ಭೂಮಿ ನೀರಾವರಿ ಆಗಲಿದೆ. ಈ ನಿಟ್ಟಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಅನುಷ್ಠಾನಕ್ಕೆ ತರಲು ಮುಂದಾಗಬೇಕು’ ಎಂದು ಹೇಳಿದರು.
ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ, ಲಕ್ಷ್ಮೇಶ್ವರ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕರಿಯಪ್ಪಗೌಡ ಹೊಸಗೌಡ್ರ, ನಿಂಗನಗೌಡ ಹೊಸಗೌಡ್ರ, ಅಣ್ಣಪ್ಪ ರಾಮಗೇರಿ, ಸಿದ್ದನಗೌಡ ಬಳ್ಳೊಳ್ಳಿ, ನೀಲಪ್ಪಗೌಡ ದುರಗನಗೌಡ್ರ, ಸುಧಾ ಮಾದರ, ಪ್ರೇಮವ್ವ ರಾಯಣ್ಣವರ, ದುಂಡಪ್ಪ ರಾಯಣ್ಣವರ, ನಾಗರಾಜ ದ್ಯಾಮನಕೊಪ್ಪ, ನಿಂಗನಗೌಡ ಹೊಸಮನಿ, ನಿಂಗಪ್ಪ ಶಿವಬಸಣ್ಣವರ, ಆರ್.ಸಿ. ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.