ಮುಂಡರಗಿ: ‘ಹನಿ ನೀರಾವರಿ ಪದ್ಧತಿಯನ್ನು ಗುತ್ತಿಗೆದಾರರು ಅಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಅಂತಹ ಗುತ್ತಿಗೆದಾರರನ್ನು ಸರ್ಕಾರ ಕಪ್ಪುಪಟ್ಟಿಗೆ ಸೇರಿಸಬೇಕು. ಹನಿ ನೀರಾವರಿ ಪದ್ಧತಿ ಬದಲು ರೈತರ ಜಮೀನಿಗೆ ಕಾಲುವೆ ಮೂಲಕ ನೀರು ಒದಗಿಸಬೇಕು’ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ನೀರಾವರಿ ಮತ್ತು ಸಕ್ಕರೆ ಕಾರ್ಖಾನೆಯ ವಿವಿಧ ಅಧಿಕಾರಿಗಳು ಹಾಗೂ ರೈತರು ಮಂಗಳವಾರ ಹಮ್ಮಿಕೊಂಡಿದ್ದ ರೈತರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
‘ಗುತ್ತಿಗೆದಾರರು ರೈತರ ಜಮೀನಿನಲ್ಲಿ ಮನ ಬಂದಂತೆ ಹನಿ ನೀರಾವರಿ ಸಲಕರಣೆಗಳನ್ನು ಜೋಡಿಸುತ್ತಿದ್ದಾರೆ. ಹನಿ ನೀರಾವರಿ ಜೋಡನೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಕ್ರಮ ನಡೆಸುತ್ತಿದ್ದಾರೆ’ ಎಂದು ರೈತರು ಆರೋಪಿಸಿದರು.
ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿರುವ ವಿಜಯ ನಗರ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬು ಖರೀದಿಯಲ್ಲಿ ತಾರತಮ್ಯ ಎಸಗುತ್ತಿದ್ದಾರೆ. ಕೊಪ್ಪಳ ಭಾಗದ ರೈತರ ಪ್ರತಿ ಟನ್ ಕಬ್ಬಿಗೆ ₹2,800 ರೂಪಾಯಿ ನೀಡುತ್ತಿದ್ದು, ಸ್ಥಳಿಯ ರೈತರ ಕಬ್ಬಿಗೆ ₹ 2,500 ನೀಡುತ್ತಿದ್ದಾರೆ. ಇಲ್ಲಿಯ ರೈತರಿಗೂ ಪ್ರತಿ ಟನ್ ಕಬ್ಬಿಗೆ ₹2,800 ರೂಪಾಯಿ ದರ ನೀಡದಿದ್ದರೆ ಸಕ್ಕರೆ ಕಾರ್ಖಾನೆ ಬಂದ್ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.
ಸಕ್ಕರೆ ಕಾರ್ಖಾನೆಯ ಅಧಿಕಾರಿ ಅಂಬಿಗರ ಬಸವರಾಜ ಮಾತನಾಡಿ, ‘ಎಲ್ಲ ರೈತರಿಗೂ ಒಂದೆ ದರ ನಿಗದಿಗೊಳಿಸಿದ್ದು, ತಾರತಮ್ಯ ಎಸಗಿಲ್ಲ’ ಎಂದು ಸಮಜಾಯಿಸಿ ನೀಡಿದರು.
ಬೆಳೆ ಸಾಲ ಪಡೆದುಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಹಲವು ದಾಖಲೆಗಳನ್ನು ಕೇಳುತ್ತಿದ್ದು, ಮೊದಲಿನಂತೆ ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ರೈತರಿಂದ ಬೆಳೆ ಸಾಲದ ಹಣ ಮರುಪಾವತಿಯ ಕ್ರಮವನ್ನು ಸರಳಗೊಳಿಸಬೇಕು ಎಂದು ರೈತರು ಮನವಿ ಮಾಡಿಕೊಂಡರು.
ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ ಸಂತೋಷ.ಎಂ.ವಿ. ಮಾತನಾಡಿ, ‘ಹಲವು ಗ್ರಾಮೀಣ ಬ್ಯಾಂಕ್‌ಗಳನ್ನು ಒಂದೇ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗಿದೆ. ಬ್ಯಾಂಕ್ ಅಡಿಟ್ ಹಾಗೂ ತಾಂತ್ರಿಕ ಕಾರಣಗಳಿಗಾಗಿ ರೈತರಿಂದ ಎಲ್ಲ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.
ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕಂಬಳಿ, ರೈತ ಮುಖಂಡರಾದ ಚಂದ್ರಕಾಂತ ಉಳ್ಳಾಗಡ್ಡಿ, ಶರಣಪ್ಪ ಚನ್ನಳ್ಳಿ, ಈರಣ್ಣ ಗಡಾದ, ಅಶ್ವಿನಿ ಬೀಡನಾಳ ಇದ್ದರು.
ಕಬ್ಬು ದರ ತಾರತಮ್ಯ ಕುರಿತಂತೆ ರೈತರು ಅಗತ್ಯ ದಾಖಲೆಗಳೊಂದಿಗೆ ಸಕ್ಕರೆ ಕಾರ್ಖಾನೆಯ ವಿರುದ್ಧ ಪ್ರಕರಣ ದಾಖಲಿಸಬಹುದು
- ಎರ್ರಿಸ್ವಾಮಿ.ಪಿ.ಎಸ್ ತಹಶೀಲ್ದಾರ್
ಯೋಜನೆ ಸದುಪಯೋಗಕ್ಕೆ ಸಲಹೆ
‘ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಜಾರಿಗೆ ತಂದಿದ್ದು ಸಾರ್ವಜನಿಕರು ವಾರ್ಷಿಕ ₹ 20 ತುಂಬಬೇಕು. ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆಯಲ್ಲಿ ವಾರ್ಷಿಕ ₹ 456 ತುಂಬಬೇಕು. ಯೋಜನೆಯಲ್ಲಿ ಪಾಲ್ಗೊಂಡವರಿಗೆ ಅಪಘಾತ ಹಾಗೂ ಮರಣ ನಂತರ ಗರಿಷ್ಟ ಹಣ ದೊರೆಯಲಿದೆ. ಪಿಂಚನಿ ಯೋಜನೆಯು ಲಾಭದಾಯಕವಾಗಿದ್ದು ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿ ಸಂತೋಷ.ಎಂ.ವಿ. ಮನವಿ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.