ಲಕ್ಷ್ಮೇಶ್ವರ: ಯಾವುದೇ ಊರಿನ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ದೊಡ್ಡದು. ಒಂದು ತಾಲ್ಲೂಕು ಅಭಿವೃದ್ಧಿಯಲ್ಲಿ ಮುಂದಿದೆ ಎಂದರೆ ಅದಕ್ಕೆ ಆ ಕ್ಷೇತ್ರದಲ್ಲಿನ ಅತ್ಯುತ್ತಮ ಸಂಪರ್ಕ ಜಾಲವೇ ಪ್ರಮುಖ ಕಾರಣ. ಆದರೆ, ಲಕ್ಷ್ಮೇಶ್ವರ ತಾಲ್ಲೂಕಿನ ಅಭಿವೃದ್ಧಿಗೆ ಇಲ್ಲಿರುವ ಹಾಳಾಗಿರುವ ರಸ್ತೆಗಳು ಅಡ್ಡಿಯಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ವ್ಯವಹಾರ, ವಾಣಿಜ್ಯ, ಶಿಕ್ಷಣ, ರಾಜಕೀಯವಾಗಿ ಜಿಲ್ಲೆಯಲ್ಲಿಯೇ ಲಕ್ಷ್ಮೇಶ್ವರ ತಾಲ್ಲೂಕು ಪ್ರಗತಿಯ ಹಾದಿಯಲ್ಲಿದೆ. ವ್ಯವಸ್ಥಿತ ಎಪಿಎಂಸಿ ಮಾರುಕಟ್ಟೆ, ಜಿನ್ನಿಂಗ್ ಫ್ಯಾಕ್ಟರಿಗಳು, ಹತ್ತಾರು ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಪದವಿಪೂರ್ವ ಕಾಲೇಜು, ಅಗಡಿ ಎಂಜಿನಿಯರಿಂಗ್ ಕಾಲೇಜು, ಶಿಗ್ಲಿಯಲ್ಲೂ ಕೂಡ ಉತ್ತಮ ಮಾಧ್ಯಮಿಕ ಶಾಲೆಗಳು, ಸರ್ಕಾರಿ ಪದವಿಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಆದರೆ, ತಾಲ್ಲೂಕಿನಲ್ಲಿನ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಮತ್ತು ಪಿಎಂಜಿಎಸ್‌ಆರ್‌ವೈ ಇಲಾಖೆಗಳಿಗೆ ಸೇರಿದ ಎಲ್ಲ ರಸ್ತೆಗಳು ಹಾಳಾಗಿದ್ದು ಅಭಿವೃದ್ಧಿಗೆ ಅಡ್ಡಗಾಲು ಆಗಿವೆ. ಇಡೀ ತಾಲ್ಲೂಕಿನಲ್ಲಿ ಎಲ್ಲೇ ಹುಡುಕಿದರೂ ಸುಸಜ್ಜಿತ ರಸ್ತೆಗಳು ಕಾಣ ಸಿಗುವುದಿಲ್ಲ. ಹಿಂದೆ ನಿರ್ಮಿಸಿದ್ದ ರಸ್ತೆಗಳಲ್ಲಿ ಅಡಿಗಡಿಗೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ವಾಹನ ಸವಾರರು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿ ಬಿದ್ದ ರಸ್ತೆಗಳು ಜನರ ಪ್ರಾಣಕ್ಕೆ ಎರವಾಗುತ್ತಿವೆ.
ಪಾಳಾ-ಬದಾಮಿ, ಇಳಕಲ್-ಕಾರವಾರ ಮತ್ತು ಲಕ್ಷ್ಮೇಶ್ವರ-ಮಂಗಸೂಳಿ ಈ ಮೂರು ರಾಜ್ಯ ಹೆದ್ದಾರಿಗಳು ಸೇರಿದಂತೆ ಒಟ್ಟು 495 ಕಿ.ಮೀ. ಉದ್ದದ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಟ್ಟಿದೆ. ಇನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 412 ಕಿ.ಮೀ. ಉದ್ದದ 112 ರಸ್ತೆಗಳು ಬರುತ್ತವೆ. ಪಿಎಂಜಿಎಸ್‌ಆರ್‌ವೈ ಇಲಾಖೆ ವ್ಯಾಪ್ತಿಯಲ್ಲೂ ನೂರಾರು ಕಿ.ಮೀ. ರಸ್ತೆ ಬರುತ್ತದೆ.
ಲೋಕೋಪಯೋಗಿ ಇಲಾಖೆ ರಸ್ತೆಗಳು: ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮಂಗಸೂಳಿ ಮತ್ತು ಪಾಳಾ-ಬದಾಮಿ ರಾಜ್ಯ ಹೆದ್ದಾರಿಗಳು ಮತ್ತು ಲಕ್ಷ್ಮೇಶ್ವರ-ಹರದಗಟ್ಟಿ, ಲಕ್ಷ್ಮೇಶ್ವರ-ಶಿಗ್ಲಿ-ದೊಡ್ಡೂರು ರಸ್ತೆಗಳು ಇದ್ದುದರಲ್ಲಿ ಸ್ವಲ್ಪ ಉತ್ತಮ ಸ್ಥಿತಿಯಲ್ಲಿವೆ.
ಇನ್ನುಳಿದಂತೆ ಗೋವನಾಳ-ಶಿಗ್ಲಿ, ಲಕ್ಷ್ಮೇಶ್ವರ-ದೊಡ್ಡೂರು-ಸೂರಣಗಿ-ಬಾಲೆಹೊಸೂರು, ಸೂರಣಗಿ-ನೆಲೂಗಲ್ಲ, ಲಕ್ಷ್ಮೇಶ್ವರ-ಮಾಗಡಿ, ಲಕ್ಷ್ಮೇಶ್ವರ-ಮಾಗಡಿ-ಯಳವತ್ತಿ-ಯತ್ನಳ್ಳಿ-ಮಾಡಳ್ಳಿ, ಲಕ್ಷ್ಮೇಶ್ವರ-ಯತ್ನಳ್ಳಿ ಸೇರಿದಂತೆ ಮತ್ತಿತರ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದಿವೆ. ಅದರಲ್ಲೂ ಸೂರಣಗಿ-ಬಾಲೆಹೊಸೂರು ರಸ್ತೆ ಬದಲಾಗಿ ಹಳ್ಳವಾಗಿ ಪರಿವರ್ತನೆ ಹೊಂದಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತು ಹಳ್ಳದಂತೆ ಕಾಣುತ್ತದೆ. ಇದೇ ಸ್ಥಿತಿ ಗೋವನಾಳ-ಶಿಗ್ಲಿ ರಸ್ತೆಯದ್ದು. ಈ ರಸ್ತೆಯಂತೂ ಸಂಪೂರ್ಣ ಹಾಳಾಗಿ ನಾಲ್ಕೈದು ವರ್ಷಗಳೇ ಕಳೆದಿವೆ. ದುರಸ್ತಿ ಭಾಗ್ಯ ಮಾತ್ರ ಕೂಡಿ ಬಂದಿಲ್ಲ.
ಜಿಲ್ಲಾ ಪಂಚಾಯಿತಿ ರಸ್ತೆಗಳು: ಶಿಗ್ಲಿ–ಹೂವಿನಶಿಗ್ಲಿ, ಶಿಗ್ಲಿ-ನಾಯಿಕೆರೂರ-ಉಳ್ಳಟ್ಟಿ ಕ್ರಾಸ್‌ನಿಂದ ಶಿಗ್ಲಿ, ಉಂಡೇನಹಳ್ಳಿ-ಮುನಿಯನ ತಾಂಡಾ, ಬಾಲೆಹೊಸೂರು-ಇಚ್ಚಂಗಿ, ಪುಟಗಾಂವ್‌ಬಡ್ನಿ-ಸೂರಣಗಿ, ಅಕ್ಕಿಗುಂದ-ಲಕ್ಷ್ಮೇಶ್ವರ, ಮಾಡಳ್ಳಿ-ಕಲ್ಲೂರು, ಮಾಡಳ್ಳಿ-ಬಾಗವಾಡ, ಮಾಡಳ್ಳಿ-ಬರದ್ವಾಡ, ಗುಲಗಂಜಿಕೊಪ್ಪ-ಮುಕ್ತಿಮಂದಿರ ರಸ್ತೆಗಳಲ್ಲಿ ಮೊಣಕಾಲೆತ್ತರದ ಗುಂಡಿಗಳು ಬಿದ್ದು ಹಾಳಾಗಿವೆ. ಜಿಲ್ಲಾ ಪಂಚಾಯಿತಿ ರಸ್ತೆಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಹೀಗಾಗಿ ಇವುಗಳ ಪಾತ್ರ ಬಹಳ ಮಹತ್ವದ್ದು. ಆದರೆ ಸದ್ಯ ಈ ಇಲಾಖೆಗೆ ಸೇರಿದ ಲಕ್ಷ್ಮೇಶ್ವರ-ಮುಕ್ತಿಮಂದಿರ ರಸ್ತೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿವೆ.
ಇದೇ ಪರಿಸ್ಥಿತಿ ಪಿಎಂಜಿಎಸ್‌ಆರ್‌ವೈ ರಸ್ತೆಗಳದ್ದಾಗಿದೆ. ಒಂದೆರಡು ರಸ್ತೆಗಳನ್ನು ಹೊರತುಪಡಿಸಿ ಇಲಾಖೆಗೆ ಸೇರಿದ ಉಳಿದ ಎಲ್ಲ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆ ಅಧಿಕಾರಿಗಳ ಕಚೇರಿ ತಾಲ್ಲೂಕಿನಲ್ಲಿ ಇರುವುದರಿಂದ ಅವರು ಜನರ ಕೈಗೆ ಸಿಗುತ್ತಾರೆ. ಆದರೆ ಜಿಲ್ಲೆಗೆ ಒಂದೇ ಕಚೇರಿ ಹೊಂದಿರುವ ಪಿಎಂಜಿಎಸ್‌ಆರ್‌ವೈ ಇಲಾಖೆ ಅಧಿಕಾರಿಗಳು ಮಾತ್ರ ಜನರ ಕಣ್ಣಿಗೆ ಕಾಣುವುದೇ ಅಪರೂಪ. ಹೀಗಾಗಿ ಅವರ ಇಲಾಖೆಯ ರಸ್ತೆಗಳ ದುರಸ್ತಿಯೂ ಕೂಡ ಅಪರೂಪ ಎಂಬಂತಾಗಿದೆ. ಮೂರೂ ಇಲಾಖೆಗೆ ಸೇರಿದ ಶೇ 90ರಷ್ಟು ರಸ್ತೆಗಳು ಹದಗೆಟ್ಟು ದುರಸ್ತಿ ಅಥವಾ ಮರು ನಿರ್ಮಾಣಕ್ಕೆ ಕಾಯುತ್ತಿವೆ.
ರಸ್ತೆ ಹಾಳಾಗಲು ಕಾರಣಗಳು: ಅನುದಾನದ ಕೊರತೆ, ಗುತ್ತಿಗೆದಾರರ ಕಳಪೆ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ್ಯ, ನಿರಂತರವಾಗಿ ಸಂಚರಿಸುವ ಭಾರಿ ವಾಹನಗಳಿಂದಾಗಿ ರಸ್ತೆಗಳು ಹಾಳಾಗುತ್ತಿವೆ.
ಅದರಲ್ಲೂ ತಾಲ್ಲೂಕಿನ ಗುಡ್ಡಗಾಡು ಮತ್ತು ಪಟ್ಟಾಭೂಮಿಯಲ್ಲಿ ಬಹಳಷ್ಟು ಕ್ರಶರ್‌ಗಳು ಇದ್ದು ಅಲ್ಲಿ ಉತ್ಪಾದಿಸುವ ಜಲ್ಲಿಕಲ್ಲು, ಕಡಿ, ಮರಳನ್ನು ನೂರಾರು ಲಾರಿಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ಇವು ಸರ್ಕಾರ ನಿಗದಿಪಡಿಸಿದ ಭಾರಕ್ಕಿಂತ ಹೆಚ್ಚಿನ ಭಾರ ಹೊತ್ತು ಸಾಗುತ್ತವೆ. ಅದರೊಂದಿಗೆ ಹಳ್ಳ ಮತ್ತು ಪಟ್ಟಾಭೂಮಿ ಒಡಲನ್ನು ಬಗೆದು ಅಲ್ಲಿ ಸಿಗುವ ಮರಳನ್ನೂ ಸಾಗಿಸಲಾಗುತ್ತಿದೆ. ಈ ಕಾರಣದಿಂದಾಗಿ ರಸ್ತೆಗಳು ಹಾಳಾಗುತ್ತಿವೆ ಎಂಬುದು ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಮತ್ತು ಪಿಎಂಜಿಎಸ್‌ಆರ್‌ವೈ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಆದರೆ, ಇದೇ ನೆಪದಲ್ಲಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದರಿಂದ ಗುತ್ತಿಗೆದಾರರು ರಸ್ತೆ ಕೆಲಸವನ್ನು ಕಳಪೆ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಇವೆ.
ಎರಡು ದಶಕಗಳ ಹಿಂದೆ ಮೈಲುಗೂಲಿಗಳು ಕಾರ್ಯನಿರ್ವಹಿಸುತ್ತಿದ್ದರು. ರಸ್ತೆ ಸ್ವಲ್ಪ ಗುಂಡಿ ಬಿದ್ದರೂ ಮೈಲುಗೂಲಿಗಳು ತಕ್ಷಣ ಮಣ್ಣಿನಿಂದ ಅವುಗಳ ಮುಚ್ಚಿ ದುರಸ್ತಿ ಮಾಡುತ್ತಿದ್ದರು. ಆದರೆ, ಈಗ ಮೈಲುಗೂಲಿಗಳೇ ಇಲ್ಲ. ಹೀಗಾಗಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ರಸ್ತೆಗಳನ್ನು ಪುನರ್ ನಿರ್ಮಿಸಿ
ಶಿಗ್ಲಿ–ಗೋವನಾಳ ರಸ್ತೆ ಹಾಳಾಗಿ ನಾಲ್ಕೈದು ವರ್ಷಗಳು ಆಗಿವೆ. ಆದರೆ ಇನ್ನೂ ದುರಸ್ತಿ ಮಾಡಿಸಿಲ್ಲ. ಇದರಿಂದಾಗಿ ಇಲ್ಲಿ ಬಸ್ ಸಂಚರಿಸುವುದಿಲ್ಲ. ಆದಷ್ಟು ಬೇಗನೇ ಈ ರಸ್ತೆಯನ್ನು ಪುನರ್ ನಿರ್ಮಿಸಬೇಕು
-ಎಸ್.ಪಿ. ಬಳಿಗಾರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಶಿಗ್ಲಿ
ಗುಂಡಿ ಮುಚ್ಚಿಸಿ ಸೂರಣಗಿ
ನೆಲ್ಲೂಗಲ್ಲ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದೆ. ಬೇಗನೆ ಅದನ್ನು ದುರಸ್ತಿ ಮಾಡಿಸಬೇಕು
-ವಿರುಪಾಕ್ಷಪ್ಪ ಮುದಕಣ್ಣವರ ಹುಲ್ಲೂರು ಗ್ರಾಮದ ನಿವಾಸಿ
ರಸ್ತೆಯಲ್ಲೇ ದೊಡ್ಡ ಗುಂಡಿ
ಲಕ್ಷ್ಮೇಶ್ವರ–ದೊಡ್ಡೂರು ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಲಕ್ಷ್ಮೇಶ್ವರ– ಒಡೆಯರಮಲ್ಲಾಪುರ ರಸ್ತೆ ಸಂಪೂರ್ಣ ಕಿತ್ತು ಹಾಳಾಗಿದೆ. ಬೇಗನೇ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು
-ಪೂರ್ಣಾಜಿ ಖರಾಟೆ ಲಕ್ಷ್ಮೇಶ್ವರದ ನಿವಾಸಿ
ಬಸ್ ಸಂಚಾರವೇ ಬಂದ್
ಸೂರಣಗಿ–ಬಾಲೆಹೊಸೂರು ರಸ್ತೆ ಸಂಪೂರ್ಣ ಹಾಳಾಗಿ ಹಳ್ಳದಂತಾಗಿದೆ. ಅಲ್ಲದೆ ಬಾಲೆಹೊಸೂರು ಗ್ರಾಮದ ಹತ್ತಿರ ಸಣ್ಣ ಸೇತುವೆ ಕುಸಿದು ಬಸ್ ಸಂಚಾರವೇ ಬಂದ್ ಆಗಿದೆ. ಕೂಡಲೇ ದುರಸ್ತಿ ಮಾಡಿಸಬೇಕು
-ಕೇಶವ ಕಟ್ಟಿಮನಿ ಬಾಲೆಹೊಸೂರು ಗ್ರಾಮದ ನಿವಾಸಿ
ನಯಾಪೈಸೆ ಅನುದಾನ ನೀಡಿಲ್ಲ
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಹಾಳಾದ ರಸ್ತೆಗಳ ಕುರಿತು ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೆ ತಂದಿದ್ದೇನೆ. ಈವರೆಗೆ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಿಲ್ಲ. ಆದಷ್ಟು ಬೇಗನೇ ಅನುದಾನ ತಂದು ಆದ್ಯತೆ ಮೇರೆಗೆ ಹಾಳಾದ ರಸ್ತೆಗಳನ್ನು ದುರಸ್ತಿ ಮತ್ತು ಪುನರ್ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
- ಡಾ.ಚಂದ್ರು ಲಮಾಣಿ ಶಾಸಕರು ಶಿರಹಟ್ಟಿ
ಅನುದಾನ ಸಿಕ್ಕ ನಂತರ ದುರಸ್ತಿ ಹದಗೆಟ್ಟ ರಸ್ತೆಗಳ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಅನುದಾನ ಬಂದ ತಕ್ಷಣ ರಸ್ತೆ ದುರಸ್ತಿ ಮಾಡಿಸಲಾಗುವುದು
-ಫಕ್ಕೀರೇಶ ತಿಮ್ಮಾಪುರ ಲೋಕೋಪಯೋಗಿ ಇಲಾಖೆ
ಎಇಇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ನಮ್ಮ ಇಲಾಖೆಗೆ ಸೇರಿದ ರಸ್ತೆಗಳು ಹಾಳಾಗಿರುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅನುದಾನ ಬಂದ ಕೂಡಲೇ ಆದ್ಯತೆ ಮೇರೆಗೆ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಿಸಲಾಗುವುದು
-ಮಾರುತಿ ರಾಠೋಡ ಜಿಲ್ಲಾ ಪಂಚಾಯಿತಿ ಇಲಾಖೆ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.