ADVERTISEMENT

ದುಡಿಯೋಣ ಬಾ ಅಭಿಯಾನ: ಗ್ರಾಮೀಣ ಜನರಿಗೆ ಸಹಕಾರಿ

ತಾಲ್ಲೂಕು ಪಂಚಾಯತ್ ಇಒ ಎಸ್.ಕೆ. ಇನಾಮದಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:18 IST
Last Updated 4 ಮೇ 2025, 14:18 IST
ನರಗುಂದ ತಾಲ್ಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ನಡೆಸಲಾಯಿತು
ನರಗುಂದ ತಾಲ್ಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ನಡೆಸಲಾಯಿತು   

ನರಗುಂದ: ‘ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ದುಡಿಯೋಣ ಬಾ ಅಭಿಯಾನದ ಮೂಲಕ ಸ್ಥಳೀಯವಾಗಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಜನರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯತ್ ಇಒ ಎಸ್.ಕೆ. ಇನಾಮದಾರ ಹೇಳಿದರು.

ತಾಲ್ಲೂಕಿನ ಹುಣಸಿಕಟ್ಟಿ ಹಾಗೂ ಬೆನಕನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ಹಾಗೂ ರೋಜಗಾರ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.

‘ನರೇಗಾ ಯೋಜನೆಯಿಂದ ದುರ್ಬಲ ಕುಟುಂಬಗಳನ್ನು ಸಕ್ರಿಯಾಗಿ ಪಾಲ್ಗೊಳ್ಳುವಂತೆ ಮಾಡುವುದು, ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು ದುಡಿಯೋಣ ಬಾ ಅಭಿಯಾನದ ಉದ್ದೇಶವಾಗಿದೆ’ ಎಂದರು.

ADVERTISEMENT

‘ನರೇಗಾ ಕೂಲಿ ದರವನ್ನು ಏ.1ರಿಂದ ₹370ಗೆ ಹೆಚ್ಚಳ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯುವ ಅವಕಾಶವಿದೆ. ವೀಕಲಚೇತನರು, ವಯೋವೃದ್ಧರು ಹಾಗೂ ಮಹಿಳೆಯರಿಗೆ ಕೆಲಸ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಕಾಮಗಾರಿ ಸ್ಥಳಗಳಲ್ಲಿ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಶಿಬಿರ ಆಯೋಜಿಸಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ’ ಎಂದರು.

‘ನರೇಗಾ ಕೆಲಸಕ್ಕೆ ಬರುವ ಕೂಲಿಕಾರರು ಕಡ್ಡಾಯವಾಗಿ ಎನ್ಎಂಆರ್‌ ಒಳಗಡೆ ಹೆಸರು ಇರಬೇಕು. ಕಡ್ಡಾಯವಾಗಿ ಬೆಳಿಗ್ಗೆ ಮತ್ತು ನಂತರ ಎನ್ಎಂಎಂಎಸ್ ಹಾಜರಾತಿಯನ್ನು ಹಾಕಿಸಬೇಕು. ಅಳತೆಗೆ ಅನುಸಾರ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಕೂಲಿ ಪಾವತಿಯಾಗಲಿದೆ’ ಎಂದರು.

ನರೇಗಾ ಕೂಲಿಕಾರರಿಗೆ ಆರೋಗ್ಯ ಶಿಬಿರ: ಬೆನಕನಕೊಪ್ಪ ಗ್ರಾಮದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಯಿತು. ಈ ವೇಳೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ತಲೆನೋವು ಸೇರಿ ಇತರೆ ಕಾಯಿಲೆಗಳ ತಪಾಸಣೆ ಮಾಡಿ ಔಷಧಿ ವಿತರಿಸಿದರು.

ಪಿಡಿಒ ವಿರುಪಾಕ್ಷಗೌಡ ರಾಯನಗೌಡ್ರ, ತಾಂತ್ರಿಕ ಸಹಾಯಕ ಬೀರೇಶ ಡಂಬಳ, ಕಾರ್ಯದರ್ಶಿ ಶರಣಪ್ಪ ಬಾರಕೇರ, ನರೇಗಾ ಹಾಗೂ ಪಂಚಾಯತ್ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿಕಾರರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.